Sunday, October 6, 2024
Homeರಾಜ್ಯರಾಜ್ಯದಲ್ಲಿ ಡೆಂಘೀ ಹಾವಳಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ, ಜನರ ನರಳಾಟ

ರಾಜ್ಯದಲ್ಲಿ ಡೆಂಘೀ ಹಾವಳಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ, ಜನರ ನರಳಾಟ

ಬೆಂಗಳೂರು,ಜು.7- ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ತೀವ್ರಗೊಂಡಿರುವ ನಡುವೆಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಕಂಡುಬಂದಿದ್ದು, ಜನಸಾಮಾನ್ಯರು ಸಂಕಷ್ಟಕ್ಕೀಡಾಗುವಂತಾಗಿದೆ.

ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಾಸಿಟಮಲ್‌ ಹೊರತುಪಡಿಸಿದರೆ, ಉಳಿದ ಔಷಧಿಗಳ ಕೊರತೆ ತೀವ್ರವಾಗಿ ಕಾಡುತ್ತಿವೆ. ಸರ್ಕಾರದಿಂದ ಔಷಧಿ ಖರೀದಿಗೆ ಸರಿಯಾದ ಅನುದಾನ ದೊರೆಯುತ್ತಿಲ್ಲ ಎಂಬ ಆರೋಪಗಳು ತೀವ್ರವಾಗಿವೆ.

ರಾಜ್ಯಸರ್ಕಾರ ಯಾವುದೇ ಆರೋಗ್ಯ ಪರಿಸ್ಥಿತಿಯನ್ನು ನಿಭಾಯಿಸಲು ಸರ್ವಸನ್ನದ್ಧವಾಗಿದೆ ಎಂಬ ಹೇಳಿಕೆಗಳು ಪದೇಪದೇ ಕೇಳಿಬರುತ್ತಿವೆ. ಆದರೆ, ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ.

ಸುಮಾರು ಏಳೆಂಟು ಸಾವಿರ ಮಂದಿ ಈ ಸೋಂಕಿನಿಂದ ಸಂಕಷ್ಟಕ್ಕೀಡಾಗಿದ್ದಾರೆ. ಅವರ ಚಿಕಿತ್ಸೆಗೆ ಅಗತ್ಯವಾದ ಔಷಧೋಪಾರಗಳು ಹಾಗೂ ಪ್ರಯೋಗಾಲಯದ ಸಲಕರಣೆಗಳ ಕೊರತೆ ಎದುರಾಗಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್‌ನಿಂದ ಸೆಪ್ಟಂಬರ್‌ ನಡುವೆ ಡೆಂಘೀ ಪ್ರಕರಣಗಳು ಹೆಚ್ಚಾಗುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಎದುರಾಗಬಹುದಾದ ಸಮಸ್ಯೆಗೆ ಸರ್ಕಾರ ಪೂರ್ವತಾಲೀಮು ನಡೆಸಿತ್ತು. ಆದರೆ ಡೆಂಘೀ ಸಮಸ್ಯೆ ಒಂದು ತಿಂಗಳು ಮುಂಚಿತವಾಗಿಯೇ ಎದುರಾಗಿದ್ದು, ರಾಜ್ಯ ಸರ್ಕಾರಕ್ಕೆ ಗಲಿಬಿಲಿ ಉಂಟುಮಾಡಿದೆ.

ಹಲವಾರು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳ ಔಷಧಿ ಪೂರೈಕೆಯ ಪ್ರಮಾಣ ಶೇ.30ರಿಂದ ಶೇ.40 ಕ್ಕೆ ಕಡಿತ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನೂರು ರೋಗಿಗಳು ಚಿಕಿತ್ಸೆ ಪಡೆದರೆ, ಅವರಲ್ಲಿ ಶೇ. 30 ಮಂದಿಗೆ ಔಷಧಿ ಕೊಡುವಷ್ಟು ಮಾತ್ರ ಪೂರೈಕೆ ಇದೆ ಎಂದು ಹೇಳಲಾಗುತ್ತಿತ್ತು.

ಇತ್ತೀಚೆಗೆ ರಾಜ್ಯಸರ್ಕಾರ ಈ ಪ್ರಮಾಣವನ್ನು ಶೇ.60 ರಿಂದ ಶೇ.70 ಕ್ಕೆ ಹೆಚ್ಚಿಸಿದೆ. ಅದರಲ್ಲೂ ಕೆಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ ಲಭ್ಯವಿಲ್ಲದೆ ಸರ್ಕಾರಿ ವೈದ್ಯರು ಚೀಟಿ ಬರೆದುಕೊಡುವುದು, ಜನಸಾಮಾನ್ಯರು ಖಾಸಗಿ ಔಷಧಾಲಯಗಳಿಗೆ ಹಣ ತೆರುವುದು ಸಾಮಾನ್ಯವಾಗಿದೆ.

ಸರ್ಕಾರಿ ಆಸ್ಪತ್ರೆಗಳೆಂದರೆ ನೈರ್ಮಲ್ಯದ ಕೊರತೆ, ವೈದ್ಯಕೀಯ ಸಿಬ್ಬಂದಿಗಳ ಅಸಡ್ಡೆ ಮೊದಲಿನಿಂದಲೂ ಕೇಳಿಬರುತ್ತಿರುವ ಆರೋಪಗಳಿವೆ.ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದವರಿಗೆ ಅಲ್ಲಿನ ಅವ್ಯವಸ್ಥೆಗಳು ರೇಜಿಗಿಡಿಸುತ್ತಿವೆ. ಅನಿರೀಕ್ಷಿತವಾಗಿ ಎದುರಾಗಿರುವ ಡೆಂಘೀ ಸಮಸ್ಯೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ವೈದ್ಯರು ಬರೆದುಕೊಡುವ ಔಷಧಿಯಲ್ಲಿ ಬಹುತೇಕ ಹೊರಗಿನ ಖಾಸಗಿ ಔಷಧಾಲಯಗಳಲ್ಲೇ ಖರೀದಿಸಬೇಕಾದ ಪರಿಸ್ಥಿತಿ ಇದೆ.

ಜನರ ಆರೋಗ್ಯ ಸೇವೆಗೆ ಹಣಕಾಸಿನ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇಪದೇ ಹೇಳುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಿಯ ಕೊರತೆಯ ಬಗ್ಗೆ ಚಕಾರವೇ ಎತ್ತದೆ ಸರ್ಕಾರ ಜಾಣ ಮೌನಕ್ಕೆ ಶರಣಾಗಿದೆ.

RELATED ARTICLES

Latest News