ಬೆಂಗಳೂರು, ಜು.7– ಸೇತುವೆ ತಡೆಗೋಡೆಗೆ ಗುದ್ದಿ ರಾಜಕಾಲುವೆಗೆ ಬಿದ್ದಿದ್ದ ಬೈಕ್ ಸವಾರನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.ಬ್ಯಾಟರಾಯನಪುರದ ನಿವಾಸಿ, ಫುಡ್ ಡೆಲಿವರಿ ಬಾಯ್ ಹೇಮಂತ್‌ಕುಮಾರ್ ಮೊನ್ನೆ ರಾತ್ರಿ ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಸಮೀಪ ಅತಿ ವೇಗವಾಗಿ ಬಂದು ತಡೆಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ರಾಜಕಾಲುವೆಗೆ ಹಾರಿ ಬಿದ್ದಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸುಮಾರು ಎರಡು-ಮೂರು ಕಿಮೀ ವರೆಗೂ ಹೇಮಂತ್‌ಗಾಗಿ ಹುಡುಕಾಡಿದರಾದರೂ ಪತ್ತೆಯಾಗಿರಲಿಲ್ಲ.ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತೆರಳಿದ್ದರು.
ಸ್ಥಳದಲ್ಲಿದ್ದ ಬೈಕ್‌ಅನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೊಗಿದ್ದರು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸುವ ಮುನ್ನವೇ ಹೇಮಂತ್‌ಕುಮಾರ್ ಹಾರಿ ಬಿದ್ದಿದ್ದ ಸಮೀಪದಲ್ಲೇ ಹೂತುಕೊಂಡಿದ್ದ ಮೃತದೇಹ ಮೇಲೆ ತೇಲಿದ್ದು ಕಂಡುಬಂದಿದೆ.ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ರಾಜಕಾಲುವೆಯಿಂದ ಹೊರತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಮೊದಲು ಜ್ಞಾನಭಾರತಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸ್ವಯಂ ಅಪಘಾತ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.