Friday, October 18, 2024
Homeರಾಜ್ಯಮೈ ಶುಗರ್‌ ಸಕ್ಕರೆ ಕಾರ್ಖಾನೆ ವಿದ್ಯುತ್‌ ಬಿಲ್‌ ಮನ್ನಾ ಮಾಡುವ ಕಡತ ಮಂಡನೆಗೆ ಸಿಎಂ ಸೂಚನೆ

ಮೈ ಶುಗರ್‌ ಸಕ್ಕರೆ ಕಾರ್ಖಾನೆ ವಿದ್ಯುತ್‌ ಬಿಲ್‌ ಮನ್ನಾ ಮಾಡುವ ಕಡತ ಮಂಡನೆಗೆ ಸಿಎಂ ಸೂಚನೆ

ಬೆಂಗಳೂರು,ಜು.8- ಮಂಡ್ಯದ ಮೈ ಶುಗರ್‌ ಸಕ್ಕರೆ ಕಾರ್ಖಾನೆಯ ವಿದ್ಯುತ್‌ ಬಿಲ್‌ ಬಾಕಿಯನ್ನು ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ, ಕಡತ ಮಂಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ವಿಧಾನ ಪರಿಷತ್‌ ಶಾಸಕ ದಿನೇಶ ಗೂಳಿಗೌಡ ಅವರು ಮೈಶುಗರ್‌ ಸಕ್ಕರೆ ಕಾರ್ಖಾನೆಯ ಬಾಕಿ ವಿದ್ಯುತ್‌ ಬಿಲ್‌ ಅನ್ನು ಮನ್ನಾ ಮಾಡುವಂತೆ ಮಾಡಿರುವ ಮನವಿಗೆ ಮುಖ್ಯಮಂತ್ರಿಗಳು, ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ತರಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಮಂಡ್ಯ ಮೈ ಶುಗರ್‌ ಕಾರ್ಖಾನೆ ಕಳೆದ 25 ವರ್ಷಗಳಿಂದ ವಿದ್ಯುತ್‌ ಬಿಲ್‌ ಕಟ್ಟಿಲ್ಲ. ಹೀಗಾಗಿ 52.25 ಕೋಟಿ ರೂ. ಬಾಕಿ ಪಾವತಿಸುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯು ಮೈಶುಗರ್‌ ಸಕ್ಕರೆ ಕಾರ್ಖಾನೆಗೆ ನೋಟಿಸ್‌‍ ನೀಡಿತ್ತು. ರೈತರ ಹಿತ ದೃಷ್ಟಿಯಿಂದ ಕಾರ್ಖಾನೆ ಉಳಿಸಿಕೊಳ್ಳುವುದು ಅವಶ್ಯವಾಗಿದ್ದು, ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕು ಎಂದು ದಿನೇಶ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಮನವಿ ಪತ್ರದಲ್ಲೇನಿತ್ತು? :
ಮಂಡ್ಯದ ರೈತರ ಜೀವನಾಡಿಯಾಗಿರುವ ಮೈ ಶುಗರ್‌ ್ಯಾಕ್ಟರಿಯು ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾಗಿದೆ. ದೇಶದ ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲೇ ಮೊದಲು ಎಂದರೆ, 1932 ರಲ್ಲಿ ಈ ಕಾರ್ಖಾನೆಯು ಪ್ರಾರಂಭವಾಯಿತು. ಇದು ಮಂಡ್ಯ ಜಿಲ್ಲೆಯ ಹಾಗೂ ಕರ್ನಾಟಕದ ಹೆಮೆಯಾಗಿದೆ. ಆದರೆ, ಇದೀಗ ಕಳೆದ 25 ವರ್ಷಗಳಿಂದ ವಿದ್ಯುತ್‌ ಬಿಲ್‌ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ.

ಇದರಿಂದ ಪಾರು ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದ್ದು, ಸಂಪುಟ ಸಭೆ ಕರೆದು ಬಾಕಿ ಇರುವ ವಿದ್ಯುತ್‌ ಬಿಲ್‌ 52.25 ಕೋಟಿ ರೂಪಾಯಿಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದರು.

ಕಾರ್ಖಾನೆ ಕೆಲವು ಅನಿವಾರ್ಯ ಕಾರಣಗಳಿಂದ ಕಳೆದ 25 ವರ್ಷಗಳಿಂದ ವಿದ್ಯುತ್‌ ಬಿಲ್‌ ಕಟ್ಟಿಲ್ಲ. 52.25 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಇರುವ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ ಕಾರ್ಖಾನೆಗೆ ನೋಟಿಸ್‌‍ ನೀಡಿದೆ. ವಿದ್ಯುತ್‌ ಪಾವತಿ ಮಾಡುವಂತೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕೋಟ್ಯಂತರ ರೂಪಾಯಿ ನಷ್ಟದಲ್ಲಿದೆ.

ಅಷ್ಟೊಂದು ಹಣವನ್ನು ವಿದ್ಯುತ್‌ ಬಿಲ್‌ಗೆ ಪಾವತಿಸಿದರೆ, ಈ ಹಂಗಾಮಿನಲ್ಲಿ ಕಬ್ಬು ನುರಿಸುವುದೇ ಕಷ್ಟವಾಗಬಹುದು. ಇದರಿಂದ ಈಗಾಗಲೇ ಕಾರ್ಖಾನೆ ನಂಬಿ ಕಬ್ಬು ಬೆಳೆದಿರುವ ರೈತರಿಗೆ ನಷ್ಟವಾಗಬಹುದು ಎಂದು ದಿನೇಶ್‌ ಗೂಳಿಗೌಡ ಅವರು ಮನವಿ ಪತ್ರದಲ್ಲಿ ಸಮಸ್ಯೆಗಳ ತೀವ್ರತೆಯನ್ನು ತಿಳಿಸಿದ್ದರು.

RELATED ARTICLES

Latest News