ಬೆಂಗಳೂರು,ಜ.4- ಹೊಸ ವರ್ಷದ ಆರಂಭದ ಬೆನ್ನೆಲ್ಲೇ, ಈ ಬಾರಿ ರಾಜ್ಯದಲ್ಲಿ ಸಾಲು ಸಾಲು ಚುನಾವಣೆಗಳು ಜರುಗಲಿದ್ದು ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಲಿದೆ. ಒಂದು ಕಡೆ ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧತೆ ನಡೆಸಲು ಮುಂದಾಗಿರುವ ಸಂದರ್ಭದಲ್ಲೇ, ಈ ವರ್ಷ ರಾಜ್ಯದಲ್ಲಿ ಎಂಟು ಚುನಾವಣೆಗಳು ಜರುಗಲಿದ್ದು, ಇದು ಆಡಳಿತ ಹಾಗೂ ಪ್ರತಿಪಕ್ಷಗಳ ಪಾಲಿಗೆ ಚುನಾವಣೆಯ ವರ್ಷವಾಗಲಿದೆ. ಶಾಸಕರಾದ ಹೆಚ್.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸೇರಿದಂತೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಈ ವರ್ಷ ನಡೆಯಲಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಮಹಾನಗರ ಪಾಲಿಕೆಗಳ ಚುನಾವಣೆವರೆಗೂ ಒಟ್ಟು 8 ಚುನಾವಣೆ ನಡೆಯುವುದರಿಂದ 2026 ನೇ ವರ್ಷವೂ ಚುನಾವಣೆಯ ವರ್ಷವೆಂದೇ ಬಿಂಬಿತವಾಗಲಿದೆ. ಎರಡು ಕ್ಷೇತ್ರದಲ್ಲಿ ಉಪಚುನಾವಣೆ 2026 ರಲ್ಲಿ ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಾಗಲಕೋಟೆ ಶಾಸಕ ಹೆಚ್.ವೈ.ಮೇಟಿ ಅವರು ಕಳೆದ ವರ್ಷ ನವೆಂಬರ್ 3ರಂದು ನಿಧರಾಗಿದ್ದರು, ಹಾಗೂ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪನವರರು ಡಿಸೆಂಬರ್ 14 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಈ ಎರಡು ಕ್ಷೇತ್ರ ಹಿರಿಯ ನಾಯಕರ ನಿಧನದಿಂದ ತೆರವಾಗಿದ್ದು, ತೆರವಾಗಿರುವ ಎರಡು ಕ್ಷೇತ್ರಗಳಿಗೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ.
ವಿಧಾನ ಪರಿಷತ್ ಚುನಾವಣೆ ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2026ರ ನವೆಂಬರ್ ವೇಳೆಗೆ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ.ಸಂಕನೂರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಸದಸ್ಯರಾದ ಚಿದಾನಂದ ಎಂ. ಗೌಡ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶಿಲ್ ನಮೋಶಿ, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಸದಸ್ಯರಾಗಿದ್ದಾರೆ.
2026ರ ನವೆಂಬರ್ 11ಕ್ಕೆ ಈ ಮೇಲ್ಕಂಡ ನಾಲ್ವರು ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲೇ ಚುನಾವಣೆ ನಡೆದು ಪರಿಷತ್ ಸದಸ್ಯರ ಆಯ್ಕೆಯಾಗಬೇಕಿದೆ. ಜಿಬಿಎ ಚುನಾವಣೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ.
ಈ ವರ್ಷ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಕರ್ನಾಟಕ ಕಾಂಗ್ರೆಸ್ ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಇತ್ತ ಬಿಜೆಪಿ ಹಾಗೂ ಜೆಡಿಎಸ್ ಕೂಡ ತಯಾರಿ ನಡೆಸುತ್ತಿದ್ದು, ಒಟ್ಟು 369 ವಾರ್ಡ್‌ಗಳನ್ನು ರಚಿಸಿದ್ದು, ಈ ವರ್ಷ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.
ತಾ.ಪಂ, ಜಿ.ಪಂ ಚುನಾವಣೆ :
2026 ರ ಏಪ್ರಿಲ್ ವೇಳೆಗೆ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ರಾಜ್ಯದ 239 ತಾಲೂಕು ಪಂಚಾಯಿತಿಗಳ 3,671 ಕ್ಷೇತ್ರಗಳು ಹಾಗೂ 31 ಜಿಲ್ಲೆಗಳ 1,130 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ 2020-21ನೇ ಸಾಲಿನಿಂದ ಚುನಾವಣೆ ಬಾಕಿ ಉಳಿದಿದೆ. ಇದರ ನಡುವೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್‌ವಿಂಗಡಣೆಯನ್ನು ಸರ್ಕಾರ ಒಪ್ಪಿದ್ದರೂ, ಮೀಸಲಾತಿಯನ್ನು ಅಂತಿಮಗೊಳಿಸಿ ಚುನಾವಣಾ ಆಯೋಗಕ್ಕೆ ನೀಡಿಲ್ಲ.
ಸರ್ಕಾರ ಚುನಾವಣೆ ನಡೆಸಲು ಬಯಸಿದರೆ, ನ್ಯಾಯಾಲಯದ ಪ್ರಕರಣ ಇತ್ಯರ್ಥಗೊಂಡು ಚುನಾವಣೆ ಸುಗಮವಾಗುವುದು ಕಷ್ಟವಲ್ಲ. ಹೀಗಾಗಿ ಈ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿ ಚುನಾವಣೆಗಳ ಮೂಲಕ ಜನರ ನಾಡಿಮಿಡಿತ ಅರಿಯಲು ಸರ್ಕಾರ ಮುಂದಾಗಿದೆ.
ಮೈತ್ರಿಯಾಗಿದ್ದ ಬಿಜೆಪಿ ಹಾಗೂ ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಘೋಷಿಸಿದ್ದು, ಮೊದಲು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಿ ಬಳಿಕ ಉಳಿದ ಚುನಾವಣೆಯನ್ನು ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಸುಮಾರು 6,022 ಗ್ರಾಮ ಪಂಚಾಯಿತಿಗಳ ಪೈಕಿ ಬಹಳಷ್ಟು ಸಂಸ್ಥೆಗಳ ಅವಧಿ ಜನವರಿಯಿಂದ ಫೆಬ್ರವರಿಯೊಳಗೆ ಮುಗಿಯುತ್ತಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯೂ ಈ ವರ್ಷ ನಡೆಯಲಿದೆ.
ಮಹಾನಗರ ಪಾಲಿಕೆ ಚುನಾವಣೆ :
ಕರ್ನಾಟಕದ ಐದು ಮಹಾನಗರ ಪಾಲಿಕೆಗಳಿಗೆ 2026 ರಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಶಿವಮೊಗ್ಗ, ಮೈಸೂರು, ದಾವಣಗೆರೆ, ತುಮಕೂರು ಮತ್ತು ಮಂಗಳೂರು ಮಹಾನಗರ ಪಾಲಿಕೆಗಳಲ್ಲಿ ಮತದಾರರ ಪಟ್ಟಿ ಅಂತಿಮಗೊಂಡಿದ್ದು, ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ಅದರಂತೆ, ಇಲ್ಲದಿದ್ದರೆ ಹಳೆಯ ಮೀಸಲಾತಿ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಆಯೋಗ ಹೇಳಿದ್ದು, ಈ ವರ್ಷವೇ ಈ ಮಹಾನಗರ ಪಾಲಿಕೆಯ ಚುನಾವಣೆಗಳು ನಡೆಯಲಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಸಿದ್ದತೆ ನಡೆಸಿದ್ದು, ಇದರ ಜೊತೆಗೆ, ಅವಧಿ ಮುಗಿಯುತ್ತಿರುವ 185 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿದೆ. ಈಗಾಗಲೇ, ಅವಧಿ ಮುಗಿದ ಹಿನ್ನೆಲೆ ಹಲವೆಡೆ ಆಡಳಿತಾಧಿಕಾರಿಗಳ ನೇಮಕ ಮಾಡಿ ಆಡಳಿತ ನಡೆಸಲಾಗುತ್ತಿದೆ. ಹೀಗಾಗಿ ಈ ವರ್ಷವೇ 185 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.
