ಬೆಂಗಳೂರು,ಜು.8- ಇನ್ನೊಂದು ವಾರದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ, ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಆಯ್ಕೆ ಮಾಡಬೇಕಿದ್ದು, ಆಕಾಂಕ್ಷಿಗಳ ಅಂತಿಮ ಹಂತದ ತೆರೆಮೆರೆಯ ಕಸರತ್ತು ಜೋರಾಗಿದೆ.
ವಿಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾಗಿರುವ ಹಿನ್ನಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಇಬ್ಬರ ಹೆಸರು ಕೇಳಿ ಬರುತ್ತಿತ್ತು. ಈಗ, ಈ ಪಟ್ಟಿಗೆ ಅಚ್ಚರಿಯಾಗಿ ಮತ್ತೋರ್ವ ಹಿರಿಯ ನಾಯಕನ ಹೆಸರು ಸೇರ್ಪಡೆಯಾಗಿದೆ.
ವಿಧಾನಪರಿಷತ್ ವಿಪಕ್ಷ ನಾಯಕ ರೇಸ್‌ನಲ್ಲಿ ಸಿಟಿ ರವಿ, ಎನ್.ರವಿಕುಮಾರ್ ಸದನದಲ್ಲಿ ಹಿಂದುತ್ವ ಫೈರ್ ಬ್ಯಾಂಡ್ ಎದುರಿಸೋದು ಕೈಗೆ ಸವಾಲು!ಆದರೆ ಬಿಜೆಪಿ ವರಿಷ್ಠರು ವಿಪಕ್ಷದ ನಾಯಕನ ಆಯ್ಕೆ ಮಾಡುವ ಮುನ್ನವೇ, ಗೂಗಲ್ ತನ್ನ ಕರ್ನಾಟಕ ವಿಧಾನ ಪರಿಷತ್ ಪೇಜ್ ನಲ್ಲಿ ಛಲವಾದಿ ನಾರಾಯಣಸ್ವಾಮಿಯವರು ವಿಪಕ್ಷದ ನಾಯಕ ಎಂದು ಅಪ್ಡೇಟ್ ಮಾಡಿದೆ. ಅಲ್ಲದೇ, ಜೂನ್ 29, 2024ರಿಂದ ಅನ್ವಯವಾಗುವಂತೆ ವಿಪಕ್ಷದ ನಾಯಕ ಎಂದು ತನ್ನ ಪೇಜಿನಲ್ಲಿ ಹಾಕಿಕೊಂಡು ಅಚ್ಚರಿಯನ್ನು ಮೂಡಿಸಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಎನ್. ರವಿ ಕುಮಾರ್ ಅವರನ್ನು ಮರು ಆಯ್ಕೆ ಮಾಡಿತ್ತು. ಇದರ ಜೊತೆಗೆ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋಲುಂಡಿದ್ದ ಸಿ.ಟಿ.ರವಿ ಅವರನ್ನು ಮತ್ತು ಮಾರುತಿ ರಾವ್ ಮುಳೆ ಅವರನ್ನು ಮೇಲ್ಮನೆಗೆ ಕಳುಹಿಸಿತ್ತು.
ವಿಧಾನಪರಿಷತ್ತಿನಲ್ಲಿ ವಿಪಕ್ಷದ ನಾಯಕರಾಗಿ ಒಂದೋ ಎನ್.ರವಿಕುಮಾರ್ ಇಲ್ಲವೇ, ಸಿ.ಟಿ.ರವಿ ಆಯ್ಕೆಯಾಗಬಹುದು ಎಂದೇ ಲೆಕ್ಕಾಚಾರವಾಗಿತ್ತು. ಆದರೆ ಈಗ ಛಲವಾದಿ ನಾರಾಯಣಸ್ವಾಮಿಯವರ ಹೆಸರು ಮುನ್ನಲೆಗೆ ಬಂದಿದೆ. ಹೀಗಾಗಿ, ವಿಪಕ್ಷದ ನಾಯಕನ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಸಾಮಾಜಿಕ ಅಥವಾ ಪ್ರಾದೇಶಿಕ ನ್ಯಾಯಕ್ಕೆ ಬಿಜೆಪಿ ಹೈಕಮಾಂಡ್ ಪ್ರಾಮುಖ್ಯತೆಯನ್ನು ಕೊಟ್ಟಿದ್ದೇ ಆದಲ್ಲಿ, ರಾಜ್ಯ ಬಿಜೆಪಿ ನಾಯಕರ ಪ್ರಯತ್ನ ಕೈಗೂಡುವ ಸಾಧ್ಯತೆ ಕಮ್ಮಿ. ಇನ್ನೊಂದು ಮೂಲಗಳ ಪ್ರಕಾರ, ಅಧಿವೇಶನಕ್ಕೆ ಮುನ್ನ ವಿಪಕ್ಷದ ನಾಯಕನ ಸ್ಥಾನ ಭರ್ತಿ ಮಾಡುವ ಸಾಧ್ಯತೆಯೂ ಅನುಮಾನ ಎಂದೂ ಹೇಳಲಾಗುತ್ತಿದೆ.ವಿಪಕ್ಷದ ನಾಯಕನ ಸ್ಥಾನ ಖಾಲಿ ಬಿಟ್ಟು ವಿಧಾನ ಮಂಡಲದ ಕಾರ್ಯಕಲಾಪವನ್ನು ಬಿಜೆಪಿ ಎದುರಿಸಿದ ಉದಾಹರಣೆ ಹಿಂದೆಯೂ ಇದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಜುಲೈನಲ್ಲಿ ನಡೆದ ಮೊದಲ ಅಧಿವೇಶನದಲ್ಲಿ ಬಿಜೆಪಿ ವರಿಷ್ಠರು ವಿಧಾನಸಭೆಗೆ ತನ್ನ ನಾಯಕನನ್ನು ಆಯ್ಕೆಯೇ ಮಾಡಿರಲಿಲ್ಲ.
ಕಳೆದ ವರ್ಷದ ಇಡೀ ಜುಲೈ ಅಧಿವೇಶನ ಅಧಿಕೃತ ವಿಪಕ್ಷದ ನಾಯಕನ ಆಯ್ಕೆಯಾಗದೇ ನಡೆದಿತ್ತು. ಕಾಂಗ್ರೆಸ್ ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದಾದ ನಂತರ, ಡಿಸೆಂಬರ್ ಬೆಳಗಾವಿಯ ಚಳಿಗಾಲದ ಅಧಿವೇಶನದ ಮುನ್ನ ನವೆಂಬರ್ ತಿಂಗಳಲ್ಲಿ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿತ್ತು.
ಸಂಘಟನೆಗೆ ದುಡಿದವರಿಗೆ ಆದ್ಯತೆಯನ್ನು ಕೊಡುವ ಪರಿಪಾಠವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯಿದೆ. ತಮ್ಮ ಪಕ್ಷ ನಿಷ್ಠೆಯ ಹಿನ್ನಲೆಯಲ್ಲಿ ಛಲವಾದಿ ನಾರಾಯಣಸ್ವಾಮಿಯವರನ್ನು ಬಿಜೆಪಿ ಮೇಲ್ಮನೆಗೆ ಆಯ್ಕೆ ಮಾಡಿತ್ತು.ಸಿ.ಟಿ.ರವಿ ಮತ್ತು ರವಿ ಕುಮಾರ್ ನಡುವೆ ಛಲವಾದಿ ಹೆಸರು ಮುನ್ನಲೆಗೆ ಬಂದಿರುವುದು ಬಿಜೆಪಿಯ ಕೆಲವರು ನಾಯಕರಿಗೇ ಆಶ್ಚರ್ಯವನ್ನು ತಂದಿದೆ. 75 ಸದಸ್ಯ ಬಲದ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಇತ್ತೀಚೆಗೆ ಆಯ್ಕೆಯಾದವರನ್ನೂ ಸೇರಿ 36, ಬಿಜೆಪಿ 29, ಜೆಡಿಎಸ್ 8, ಪಕ್ಷೇತರ 1 ಸದಸ್ಯರಿದ್ದಾರೆ. ಒಂದು ಸ್ಥಾನ ಇನ್ನೂ ಖಾಲಿಯಿದೆ.