ಬೆಂಗಳೂರು,ಜು.9- ಡೆಂಘೀ ವಿಚಾರದಲ್ಲಿ ವಿರೋಧಪಕ್ಷ ಬಿಜೆಪಿ ಅನಗತ್ಯವಾಗಿ ಅಪಪ್ರಚಾರ ನಡೆಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ಷೇಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷವೂ ಮಳೆಗಾಲದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತವೆ. ಬಿಬಿಎಂಪಿ ಆಯುಕ್ತರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆಯೂ ಎಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಹಲವಾರು ಸಭೆಗಳನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗಳನ್ನು ನಡೆಸಿದ್ದಾರೆ. ಡೆಂಘೀ ನಿಯಂತ್ರಣದ ಜೊತೆಗೆ ಸಾವಿನ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಬದಲಾಗಿ ರಾಜ್ಯಸರ್ಕಾರದ ಬೇಡಿಕೆಗನುಗುಣವಾಗಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ಮಾಡಲಿ, ಅದಕ್ಕೆ ಪ್ರತಿಯಾಗಿ ಹಣ ಪಾವತಿಸಲು ತಮ ಬಳಿ ಹಣ ಇದೆಯೋ, ಇಲ್ಲವೋ ಎಂಬುದು ಅನಂತರ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಗೂ ಮುನ್ನ ಪ್ರತಿ ಕೆ.ಜಿ.ಗೆ 29 ರೂ.ಗಳಂತೆ ಭಾರತ್ ಅಕ್ಕಿ ಯೋಜನೆಯನ್ನು ಜಾರಿಗೊಳಿಸಿದ್ದರು. ಮತದಾನ ಮುಗಿಯುತ್ತಿದ್ದಂತೆ ಯೋಜನೆ ಸ್ಥಗಿತಗೊಳಿಸಿದ್ದಾರೆ. ಇದರ ಬಗ್ಗೆ ಕೇಂದ್ರ ಸಚಿವರು ಮಾತನಾಡಲಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಜ್ಯಸರ್ಕಾರದ ವಿರುದ್ಧ ಉಡಾಫೆಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಉತ್ತರಕುಮಾರನ ಪೌರುಷ ಒಲೆಯ ಮುಂದೆ ಎನ್ನುವಂತೆ ಬಿಜೆಪಿ ನಾಯಕರು ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ. ಅಕ್ಕಿಯನ್ನು ಮೊದಲು ಮಂಜೂರು ಮಾಡಿ ಅನಂತರ ಹಣ ಕೊಡದೇ ಇದ್ದರೆ ಮಾತನಾಡಲಿ ಎಂದು ಸವಾಲು ಹಾಕಿದರು.
ಚನ್ನಪಟ್ಟಣ ವಿಧಾನಸಭಾ ಚುನಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚನ್ನಪಟ್ಟಣ ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮಾಯಿ ಅವರ ಶಿಗ್ಗಾವಿ ಕ್ಷೇತ್ರ ಮತ್ತು ಬಳ್ಳಾರಿಯ ಸೊಲ್ಲೂರು ಕ್ಷೇತ್ರಗಳ ಉಪಚುನಾವಣೆ ಬಗ್ಗೆಯೂ ಚರ್ಚೆಯಾಗಲಿದೆ ಎಂದರು.ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಅವರು ಯಾವ ರಣತಂತ್ರಗಳನ್ನು ಅನುಸರಿಸುತ್ತಿದ್ದಾರೋ ಕಾದು ನೋಡಬೇಕಿದೆ ಎಂದು ಹೇಳಿದರು.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಈ ಹಿಂದೆ ರಾಮನಗರವು ಬೆಂಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ಆ ಪ್ರದೇಶವೆಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ 12 ಗ್ರಾಮಾಂತರ ಕ್ಷೇತ್ರಗಳಿದ್ದವು. ರಾಮನಗರವೂ ಸೇರಿದಂತೆ ಹಲವಾರು ಪ್ರದೇಶಗಳು ಬೆಂಗಳೂರಿನ ಭೂಭಾಗಗಳಾಗಿದ್ದವು ಎಂದರು.
ಬಿಬಿಎಂಪಿ ಪುನರ್‌ರಚನೆಯ ವರದಿ ಸಲ್ಲಿಕೆಯ ಕುರಿತು ಚರ್ಚೆಗಳಾಗಿವೆ. ಸಂಬಂಧಪಟ್ಟ ಸಚಿವರು ಇದಕ್ಕೆ ಉತ್ತರ ನೀಡುತ್ತಾರೆ ಎಂದು ಜಾರಿಕೊಂಡರು.