ತಿರುಪತಿ,ಜು.11- ಹಿಂದೂಗಳ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರವಾದ ತಿರುಪತಿಗೆ ಆಗಮಿಸುವ ಭಕ್ತರ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗಾಗಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ತಿರುಪತಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ ತಿರುಮಲದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಸಹ ನಿಷೇಧಿಸಲಾಗಿದೆ.
ಇದಲ್ಲದೆ ತಿರುಮಲಕ್ಕೆ ಗುಟ್ಕಾ, ಸಿಗರೇಟ್, ಬೀಡಿ, ಪಾನ್ ಮಸಾಲ, ಮದ್ಯದ ಬಾಟಲಿಗಳು, ಮಾಂಸ ಇತ್ಯಾದಿಗಳನ್ನು ಮತ್ತು ಬಂದೂಕು, ಚಾಕು ಮುಂತಾದ ಆಯುಧಗಳನ್ನು ತರುವುದನ್ನು ನಿಷೇಧಿಸಲಾಗಿದೆ. ತಿರುಪತಿ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಬೀಡಿ ಸೇದುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಶಾಲಾ-ಕಾಲೇಜುಗಳ ಸಮೀಪ 100 ಮೀಟರ್ ವ್ಯಾಪ್ತಿಯ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಪಾನ್‌ಮಸಾಲ, ಗುಟ್ಕಾ ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ ಎಂದು ತಿರುಪತಿ ಪೊಲೀಸ್ ಎಸ್.ಪಿ. ಹರ್ಷವರ್ಧನ್ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತಿರುಪತಿ, ತಿರುಚಾನೂರು, ರೇಣಿಗುಂಟ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದು ನಿಯಮ ಉಲ್ಲಂಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ನಡುವೆ ದೇವಸ್ಥಾನದ ಬಳಿ ಇರುವ ಅಂಗಡಿಕಾರರು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನಿಗದಿತ ಬೆಲೆಗೆ ಅಂಗಡಿಕಾರರು ವಸ್ತುಗಳನ್ನು ಮಾರಾಟ ಮಾಡಬೇಕು ಎಂದು ತಿರುಮಲ ದೇವಸ್ಥಾನ ಆದೇಶ ಹೊರಡಿಸಿದೆ. ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಟಿಟಿಡಿ ಎಚ್ಚರಿಕೆ ನೀಡಿದೆ.
ಅಂಗಡಿಗಳಲ್ಲಿ ನಿಯಮಗಳಿಗೆ ವಿರುದ್ಧವಾಗಿ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಂಗಡಿಗೆ ದಂಡ ವಿಧಿಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಹೆಚ್ಚಿನ ಬೆಲೆಗೆ ಅಂಗಡಿಕಾರರು ವಸ್ತುಗಳನ್ನು ಮಾರಾಟ ಮಾಡಿದ್ದನ್ನು ಭಕ್ತರು ಗಮನಿಸಿದರೆ ಕೂಡಲೇ ದೂರು ದಾಖಲಿಸಬಹುದು ಎಂದೂ ಟಿಟಿಡಿ ಹೇಳಿದೆ.
ತಿರುಮಲ ತಿರುಪತಿಗೆ ಪ್ರತಿನಿತ್ಯ ಹತ್ತಾರು ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಅದೇ ರೀತಿ ಹಬ್ಬ ಹರಿದಿನಗಳು ಮತ್ತು ಬ್ರಹೋತ್ಸವದ ದಿನಗಳಲ್ಲಿ ಈ ಸಂಖ್ಯೆ ಒಂದು ಲಕ್ಷವನ್ನು ಮೀರುತ್ತದೆ. ಸರ್ವ ದರ್ಶನ, ದಿವ್ಯ ದರ್ಶನ, 300 ರೂಪಾಯಿ ವಿಶೇಷ ದರದ ದರ್ಶನದ ಟಿಕೆಟ್ ಪಡೆಯುವ ಮೂಲಕ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ತಮಗೆ ಬೇಕಾದವರು ವಸತಿಯನ್ನು ಕಾಯ್ದಿರಿಸಿ ಕೆಲ ದಿನ ಉಳಿಯುವ ಮೂಲಕ ಸ್ವಾಮಿಯ ದರ್ಶನ ಪಡೆಯುತ್ತಾರೆ.