Friday, November 22, 2024
Homeರಾಜ್ಯವಾಲ್ಮೀಕಿ ನಿಗಮ ಹಗರಣದಲ್ಲಿ ಇಡಿಯಿಂದ ಕೆಲವರ ಬಂಧನ ಸಾಧ್ಯತೆ

ವಾಲ್ಮೀಕಿ ನಿಗಮ ಹಗರಣದಲ್ಲಿ ಇಡಿಯಿಂದ ಕೆಲವರ ಬಂಧನ ಸಾಧ್ಯತೆ

ಬೆಂಗಳೂರು,ಜು.11- ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮ ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಬೃಹತ್ ಕಾರ್ಯಾಚರಣೆ ದಾಳಿ ಸತತ 24 ಗಂಟೆಗಳಿಂದ ಮುಂದುವರಿದಿದೆ.

ಕಳೆದ ರಾತ್ರಿಯಿಂದ ಮಾಜಿ ಸಚಿವ ನಾಗೇಂದ್ರ ಮತ್ತು ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರುಗಳನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಮಾಜಿ ಸಚಿವ ನಾಗೇಂದ್ರ ಮನೆಗೆ ಇಡಿ ಅಧಿಕಾರಿಗಳು ಬೆಳಗಿನ ಜಾವ ಐದು ಗಂಟೆಗೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿಕೊಂಡು ಮನೆಯಲ್ಲಿ ಸಿಕ್ಕಿರುವ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕೇಳುತ್ತಿರುವ ಯಾವುದೇ ಪ್ರಶ್ನೆಗಳಿಗೆ ನಾಗೇಂದ್ರ ಮತ್ತು ದದ್ದಲ್ ಸರಿಯಾದ ಉತ್ತರ ಕೊಡದೆ ಎಲ್ಲದಕ್ಕೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಬಂಧಿಸಲು ಇಡಿ ತಂಡ ಸಜ್ಜಾಗಿದೆ. ಕೆಲವು ದಾಖಲೆಗಳ ಪರಿಶೀಲನೆ ಬಳಿಕ ಬಂಧನಕ್ಕೆ ಸಿದ್ದತೆ ನಡೆಸಲಾಗಿದೆ.

ಮನೆ ಮತ್ತು ಕಚೇರಿಯಲ್ಲಿ ಸಿಕ್ಕಿರುವ ಕೆಲವು ದಾಖಲೆಗಳ ಪರಿಶೀಲನೆಗೆ ಐಸಿಐಸಿಐ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿತ್ತು. ಅವರಿಂದ ಮಾಹಿತಿ ಪಡೆದ ನಂತರ ಯಾವುದೇ ವೇಳೆ ಬಂಧನಕ್ಕೆ ಒಳಪಡಿಸಬಹುದು ಎಂದು ಇಡಿ ಮೂಲಗಳು ತಿಳಿಸಿವೆ.ಇನ್ನು ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ನಿವಾಸಗಳ ಮೇಲೆ ನಿನ್ನೆ ಆರಂಭವಾದ ಇಡಿ ಶೋಧಕಾರ್ಯ ಕಳೆದ ರಾತ್ರಿಯಿಂದ ಮುಂಜಾನೆವರೆಗೂ ಮುಂದುವರಿದಿದೆ.

ಸಚಿವ ನಾಗೇಂದ್ರ ನಿವಾಸದಲ್ಲಿ ಕಳೆದ ಇಪ್ಪತ್ನಾಲ್ಕು ಗಂಟೆಗಳಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಶಾಸಕ ದದ್ದಲ್ ನಿವಾಸ, ಕಚೇರಿ ಸೇರಿ ಉಳಿದ ಕಡೆಯೂ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಒಟ್ಟು ಹದಿನೆಂಟು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆದಿದ್ದು, ರಾತ್ರಿ ಹನ್ನೆರಡು ಗಂಟೆಗೆ ಅಧಿಕಾರಿಗಳು ದಾಳಿಗೆ ವಿರಾಮ ನೀಡಿದ್ದರು. ದಾಳಿ ಮಾಡಿದ್ದ ಸ್ಥಳದಲ್ಲೇ ಉಳಿದುಕೊಂಡಿದ್ದರು.

ಇಡಿ ಅಧಿಕಾರಿಗಳ ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಹಾಗೂ ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಉಳಿದುಕೊಂಡಿದ್ದರು. ಒಂದೇ ಕಾಲಕ್ಕೆ ಹದಿನೆಂಟಕ್ಕೂ ಹೆಚ್ಚು ಸ್ಥಳದಲ್ಲಿ ತಪಾಸಣೆ ನಡೆಸಲಾಗಿತ್ತು. ಎಲ್ಲಾ ದಾಳಿ ಸ್ಥಳಗಳಲ್ಲಿ ಏನೆಲ್ಲಾ ದೊರೆತಿದೆ ಎಂದು ಪರಿಶೀಲನೆ ಮಾಡಿ, ನಂತರ ಇಂಟರ್ ಲಿಂಕ್ ಹೊಂದಿರುವ ಸ್ಥಳದಲ್ಲಿ ಮತ್ತೆ ದಾಖಲೆಗಳ ಪರಿಶೀಲನೆ ನಡೆಯುವುದಿದೆ. ನಿನ್ನೆ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ನನ್ನು ಇಡಿ ವಶಕ್ಕೆ ಪಡೆದು ತನಿಖೆ ನಡೆಸಿತ್ತು.

ಪಂಪಣ್ಣ ಮನೆ ಮೇಲೆ ದಾಳಿ :
ಬಸನಗೌಡ ದದ್ದಲ್ ಅವರ ಮಾಜಿ ಪಿಎ ಪಂಪಣ್ಣ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, ದದ್ದಲ್ ಆಪ್ತನ ಅಕ್ರಮ ಬಗೆದಷ್ಟೂ ಬಯಲಾಗುತ್ತಿದೆ. ಬಿಚ್ಚಾಲಿ ಗ್ರಾ.ಪಂ ಪಿಡಿಓ ಆಗಿ ನಿಯೋಜನೆಗೊಂಡಿದ್ದ ಪಂಪಣ್ಣ, ಪಿಡಿಓ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾ.ಪಂನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದ. ನೂತನ ಎಂಎಲ್ಸಿ ಒಬ್ಬರ ಪಿಎ ಆಗಲು, ಪಿಡಿಓ ಕೆಲಸಕ್ಕೆ ಹಾಜರಾಗಿರಲಿಲ್ಲ. ನಗರದ ಆಜಾದ್ ನಗರದಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿ ವಾಸ ಮಾಡುತ್ತಿದ್ದ. ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಬಸನಗೌಡ ದದ್ದಲ್ ಅವರ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ.

ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಕಮಿಷನ್ ಪಡೆದಿರುವ ಆರೋಪವಿದೆ. ಆರೋಪದ ಹಿನ್ನೆಲೆಯಲ್ಲಿ ಜುಲೈ 5 ರಂದು ಈತ ಎಸ್ಐಟಿ ವಿಚಾರಣೆ ಒಳಗಾಗಿದ್ದ. ಪಂಪಣ್ಣನಿಂದ ಮಹತ್ವದ ದಾಖಲೆಗಳನ್ನು ಇಡಿ ಪಡೆದಿದೆ. ಪಂಪಣ್ಣ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಇಡಿ ಅಧಿಕಾರಿಗಳು ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಹರೀಶ್ ಬಾಯಿ ಬಿಡಿಸಿದ ಇಡಿ :
ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್ನನ್ನು ಇಡಿ ವಿಚಾರಣೆ ನಡೆಸಿದ್ದು, ಮಲ್ಲೇಶ್ವರಂನ ಶ್ರೀಸಾಗರ ಹೋಟೆಲ್ ಬಳಿ ಡೀಲ್ ನಡೆದಿರುವುದು ಗೊತ್ತಾಗಿದೆ. ಹರೀಶ್ ಎರಡು ಬ್ಯಾಗ್ಗಳಲ್ಲಿ 25 ಲಕ್ಷ ರೂ. ಹಣ ಪಡೆದಿದ್ದ. ನಿಗಮದ ಎಂಡಿ ಪದನಾಭ, ಅಕೌಂಟೆಂಟ್ ಪರಶುರಾಮ ಬಳಿ 25 ಲಕ್ಷ ರೂ. ಕಮಿಷನ್ ಪಡೆಯಲು ಈ ಹೋಟೆಲ್ಗೆ ಬಂದಿದ್ದ. ಪಿಎ ಹರೀಶ್ ಕೊಟ್ಟ ಮಾಹಿತಿ ಅಧಾರದ ಮೇಲೆ ನಾಗೇಂದ್ರ ಅವರನ್ನು ಪ್ರಶ್ನಿಸಲಾಗುತ್ತಿದ್ದು, ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ.

ಈ 25 ಲಕ್ಷ ಹಣ ತರಿಸಿದವರು ಯಾರು, ಆ ಹಣ ಎಲ್ಲಿದೆ ಎಂಬ ಮಾಹಿತಿ ಇಡಿಗೆ ಬೇಕಾಗಿದೆ. ಸದ್ಯ ಐದು ಜನ ಇಡಿ ಅಧಿಕಾರಿಗಳ ತಂಡದಿಂದ ನಾಗೇಂದ್ರ ಮನೆಯಲ್ಲಿ ಶೋಧ ಮುಂದುವರಿದ್ದು, ಬ್ಯಾಂಕ್ ಅಧಿಕಾರಿಗಳ ಮೇಲಿನ ಇಡಿ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಾಜಿ ಸಚಿವರ ವಿಚಾರಣೆ ನಡೆಸಲಾಗುತ್ತಿದೆ.

ಬ್ಯಾಂಕ್ ಸಿಬ್ಬಂದಿಗಳಿಗೆ ಲಕ್ಷ ಲಕ್ಷ ಕಮಿಷನ್ :
ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಸಿಬ್ಬಂದಿಗೂ ಲಕ್ಷ ಲಕ್ಷ ರೂ. ಕಮಿಷನ್ ನೀಡಲಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಸಚಿವರ ಹಾಗೂ ಅಧ್ಯಕ್ಷರ ಪಿಎಗಳು ಬ್ಯಾಂಕ್ಗೆ ಸತತವಾಗಿ ಭೇಟಿ ನೀಡಿದ್ದರು. ಈಗಾಗಲೇ ಬ್ಯಾಂಕಿನ ಸಿಸಿ ಕ್ಯಾಮೆರಾ ರೆಕಾರ್ಡ್ಗಳನ್ನು ಎಸ್ಐಟಿ ಪರಿಶೀಲನೆ ಮಾಡಿದ್ದು, ಅದನ್ನು ಇಡಿ ಕೂಡ ಸಂಗ್ರಹಿಸಿದೆ. ಸಚಿವರ ಹಾಗೂ ಶಾಸಕರ ಮೇಲೆ ದಾಳಿಗೂ ಮುನ್ನ ಬ್ಯಾಂಕ್ಗೆ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದೆ.

RELATED ARTICLES

Latest News