ಬೆಂಗಳೂರು, ಜು.12-ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನ ಜುಲೈ 15ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯಗಳು ಚುರುಕುಗೊಂಡಿವೆ.
ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿಧಾನಸಭೆ ಪ್ರವೇಶದ್ವಾರವನ್ನು ನವೀಕರಿಸಲಾಗುತ್ತಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸಭಾಂಗಣ, ಮೊಗಸಾಲೆಗಳನ್ನು ಶುಚಿಗೊಳಿಸಲಾಗುತ್ತಿದೆ. ಉಭಯ ಸದನಗಳ ಪ್ರವೇಶ ದ್ವಾರಗಳಲ್ಲಿ ಅಲಂಕಾರಿಕ ಗಿಡಗಳನ್ನು ಇಟ್ಟು ಶೃಂಗರಿಸಲಾಗುತ್ತಿದೆ.
ವಿಧಾನಸಭಾಧ್ಯಕ್ಷರ ಹಾಗೂ ವಿಧಾನ ಪರಿಷತ್ ಸಭಾಪತಿಗಳ ಪೀಠದ ಇಕ್ಕೆಲಗಳಲ್ಲಿ ವಿಶೇಷ ಅಲಂಕಾರಿಕ ಗಿಡಗಳು, ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ.ಅಧಿವೇಶನಕ್ಕೆ ಇನ್ನೆರಡು ದಿನ ಬಾಕಿ ಉಳಿದಿರುವುದರಿಂದ ಉಭಯ ಸದನಗಳ ಸಿಬ್ಬಂದಿ ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿಧಾನಸೌಧದ ಪ್ರವೇಶ ದ್ವಾರಗಳು, ಕಾರಿಡಾರ್‌ಗಳನ್ನು ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ವಿಧಾನಸೌಧದ ಆವರಣದಲ್ಲೂ ಹೊಸ ಸೊಬಗು ಕಂಡುಬರುತ್ತಿದೆ.ಮಳೆಗಾಲವಾಗಿರುವುದರಿಂದ ವಿಧಾನಸೌಧದ ಆವರಣದಲ್ಲಿ ಹಚ್ಚ ಹಸಿರಿನ ವಾತಾವರಣವಿದೆ. ಗಿಡಗಳು ಹೂವುಗಳಿಂದ ಕಂಗೊಳಿಸುತ್ತಿವೆ. ಈ ಬಾರಿಯ ಅಧಿವೇಶನಕ್ಕೆ ವಿಧಾನಸೌಧದಲ್ಲಿ ಹೊಸ ಮೆರುಗು ಮೂಡಿದೆ.