ಬೆಂಗಳೂರು,ಜು.12- ಛಲ ಬಿಡದ ಹೋರಾಟಗಾರ್ತಿ ಅಮೋಘ ನಿರೂಪಣಾ ಶೈಲಿಯ ಮೂಲಕ ಕನ್ನಡ ಭಾಷೆ ಬೆಳಗಿಸಿದ ಶ್ರೇಷ್ಠ ಕನ್ನಡತಿ ಅಪರ್ಣಾ ಕನ್ನಡ ನಾಡಿನ ಮನೆ ಮಾತಾಗಿದ್ದಾರೆ. ತಮ ಮಾತಿನ ಶೈಲಿಯಿಂದಲೇ ಜನಮನ್ನಣೆ ಗಳಿಸಿದವರು. ಮೂಲತಃ ಚಿಕ್ಕಮಗಳೂರಿನ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯವರಾದ 1966 ಅಕ್ಟೋಬರ್ 14 ರಂದು ನಾರಾಯಣಸ್ವಾಮಿ ಮತ್ತು ಪದಾವತಿಯ ದಂಪತಿಯ ಮಗಳಾಗಿ ಜನಿಸಿದರು.
ಆದರೆ ಇವರು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕುಮಾರಪಾರ್ಕ್ನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಎಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಅಪರ್ಣಾ ಅವರ ತಂದೆ ನಾರಾಯಣಸ್ವಾಮಿ ಪ್ರಸಿದ್ಧ ಪತ್ರಿಕೆಯಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನಾರಾಯಣಸ್ವಾಮಿಯವರಿಗೆ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕಣಗಾಲ್ರವರು ಅಪರ್ಣಾ ಅವರ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದ್ದರು.
ಹೀಗೆ 1984 ರಲ್ಲಿ ಮಸಣದ ಹೂವು ಚಿತ್ರದಿಂದ ತಮ ಸಿನಿಮಾ ಪ್ರಯಾಣ ಆರಂಭಿಸಿದ ಅಪರ್ಣಾ ನಂತರದಲ್ಲಿ ಇನ್ಸ್ಪೆಕ್ಟರ್ ವಿಕ್ರಂ, ನಮೂರ ರಾಜ, ಸಾಹಸವೀರ, ಡಾ.ಕೃಷ್ಣ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಮನ್ನಣೆ ಗಳಿಸಿದರು. ಹಿರಿಯ ನಟರಾದ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಟೈಗರ್ ಪ್ರಭಾಕರ್ ಹಾಗೂ ಶಿವರಾಜ್ಕುಮಾರ್ ಸೇರಿದಂತೆ ಹಲವು ನಟರೊಂದಿಗೆ ಬೆಳ್ಳಿತೆರೆಯಲ್ಲಿ ಮಿಂಚಿದರು. ಇವರ ನಟನೆಯ ಕೊನೆಯ ಚಿತ್ರ ಗ್ರೇ ಗೇಮ್ಸೌ ಆಗಿತ್ತು.
1993 ರಿಂದ 2010 ರವರೆಗೂ ರೇಡಿಯೋ ಆರ್ಜೆ ಆಗಿಯೂ ಕಾರ್ಯ ನಿರ್ವಹಿಸಿದರು. 90 ರ ದಶಕದಲ್ಲಿ ದೂರದರ್ಶನ ಆಕಾಶವಾಣಿ ಕಾರ್ಯಕ್ರಮಗಳ ನಿರೂಪಣಾ ಶೈಲಿ ಅಪರ್ಣಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟವು. ಸರ್ಕಾರದ ಕಾರ್ಯಕ್ರಮಗಳು, ವಿವಿಧ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಅಪರ್ಣಾ ಅವರ ನಿರೂಪಣೆಯೇ ಇರುತ್ತಿತ್ತು.
ಭಾಷಾ ಶ್ರೀಮಂತಿಕೆಗೆ ಮೆರಗು : ಕನ್ನಡ ಭಾಷಾ ಸೌಂದರ್ಯ ಹೆಚ್ಚಿಸಿದ ನಿರೂಪಕಿ ಎಂದರೆ ತಪ್ಪಾಗಲಾರದು. ನಿರೂಪಣೆ ಎಂದರೆ ಕೇವಲ ಮಾತಲ್ಲ. ಕನ್ನಡದ ಕಂಪು, ಸಾಹಿತ್ಯ ಧಾರೆ, ಭಾಷಾ ಶ್ರೀಮಂತಿಕೆಯನ್ನು ತೋರಿಸಿಕೊಟ್ಟವರು ಅಪರ್ಣಾ. ಇದೇ ಕಾರಣಕ್ಕೆ ನಿರೂಪಣಾ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೀರ್ತಿ ಅವರದ್ದಾಯಿತು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆ ಕಾಲ ನಿರೂಪಣೆ ನಿರ್ವಹಿಸಿದ ದಾಖಲೆಯೂ ಅಪರ್ಣಾ ಅವರ ಹೆಸರಿನಲ್ಲಿದೆ.
ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ :
ಇನ್ನು ಕಿರುತೆರೆಯ ಮೂಡಲಮನೆ, ಮುಕ್ತ ಸೇರಿದಂತೆ ಹಲವಾರು ಧಾರವಾಹಿಗಳ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾದ ಅಪರ್ಣಾ ಶುದ್ಧ ಕನ್ನಡ ಸಾಹಿತ್ಯದ ಗಾಂಭೀರ್ಯದೊಂದಿಗೆ ಹಾಸ್ಯ ನಟನೆಯ ಮೂಲಕವೂ ಪರಿಚಯವಾದರು. ಕಿರುತೆರೆಯ ಮಜಾ ಟಾಕೀಸ್ನಲ್ಲಿ ಮೊದಲ ಬಾರಿಗೆ ಕಾಮಿಡಿ ಶೋನಲ್ಲಿ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಪಾತ್ರದಲ್ಲಿ ಮಿಂಚಿದರು. ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಮೊದಲ ಸೀಸನ್ನಲ್ಲಿ ಅಪರ್ಣಾ ಸ್ಪರ್ಧಿಯಾಗಿ ಜನರ ಗಮನ ಸೆಳೆದಿದ್ದರು.
ಮುಂದಿನ ನಿಲ್ದಾಣ ಬೆಂಗಳೂರಿನ ನಮ ಮೆಟ್ರೋಗೂ ದನಿಯಾಗಿದ್ದರು. ಅವರು ನಟಿ, ನಿರೂಪಕಿ ಮಾತ್ರವಲ್ಲ. ಸೃಜನಶೀಲ ಮನಸ್ಸಿನ ಕನ್ನಡದ ಶ್ರೇಷ್ಠ ಕುಡಿ. ಒಂದೇ ಒಂದು ಇಂಗ್ಲಿಷ್ ಪದ ಬಳಸದೆ ಕನ್ನಡದಲ್ಲಿಯೇ ಯಾವುದೇ ಕಾರ್ಯಕ್ರಮವನ್ನೂ ಲೀಲಾಜಾಲವಾಗಿ ನಡೆಸಿಕೊಡುತ್ತಿದ್ದ ರೀತಿ ಎಂಥವರನ್ನು ನಿಬ್ಬೆರೆಗಾಗಿಸುತ್ತಿತ್ತು.
ಅವರ ನಿರೂಪಣಾ ಶೈಲಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಚಿತ್ರರಂಗ ಕಾರ್ಯಕ್ರಮವಾಗಲೀ, ರಾಜಕೀಯ ಕಾರ್ಯಕ್ರಮವಾಗಲೀ, ಧಾರ್ಮಿಕ, ಸಾಮಾಜಿಕ, ಯಾವುದೇ ಕಾರ್ಯಕ್ರಮವಾಗಲೀ ಅಪರ್ಣಾ ಅವರ ನಿರೂಪಣೆ ಎಲ್ಲರಿಗೂ ಇಷ್ಟ. ಕೇವಲ 57 ವರ್ಷಕ್ಕೆ ಅವರು ಇಹಲೋಕ ತ್ಯಜಿಸಿದ್ದು, ಕನ್ನಡ ಅಭಿಮಾನಿ ಬಳಗಕ್ಕೆ ತುಂಬಲಾರದ ನೋವಿನ ಸಂಗತಿ.
ನನಸಾಗದ ಅಪರ್ಣಾ ಕನಸು
ಖ್ಯಾತ ನಿರೂಪಕಿಯಾಗಿದ್ದ ಅಪರ್ಣಾ ಅವರು ನಿರೂಪಣಾ ಶಾಲೆಯೊಂದನ್ನು ತೆರೆಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು.ತಮ ಗೆಳೆಯರ ಬಳಿ ಆಸೆಯನ್ನು ಹಂಚಿಕೊಂಡಿದ್ದರು. ಕೊನೆಗೂ ಅವರ ಆಸೆ ಈಡೇರಲಿಲ್ಲ. ಅವರ ಕನಸು ನನಸಾಗಲಿಲ್ಲ. ತಮ ನಿರೂಪಣಾ ಶೈಲಿಯಿಂದಲೇ ಮನೆಮಾತಾಗಿದ್ದ ಅಪರ್ಣಾ ಅವರು ನಿರೂಪಣಾ ಶಾಲೆ ತೆರೆದು ಅದನ್ನು ವಿಸ್ತರಿಸಬೇಕೆಂದು ಕಂಡಿದ್ದ ಕನಸು ಕನಸಾಗಿಯೇ ಉಳಿಯಿತು.
ಅಪರ್ಣಾ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಎರಡು ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕ್ಯಾನ್ಸರ್ ನಾಲ್ಕನೇ ಸ್ಟೇಜ್ನಲ್ಲಿತ್ತು. ಕೀಮೋಥೆರಪಿ ಮಾಡಿಸಿದ್ದರು. ಆದರೆ ಚಿಕಿತ್ಸೆ ಫಲ ಕೊಡದೆ ಇಹಲೋಕ ತ್ಯಜಿಸಿದರು.