ಬೆಂಗಳೂರು,ಜು.12- ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಪರಿಸರವನ್ನು ಹಾಳು ಮಾಡದಂತೆ ಸ್ವಚ್ಛತೆಯನ್ನು ಕಾಪಾಡಿ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ತಿಳಿಸಿದರು.
ಪೊಲೀಸ್ ಆಯುಕ್ತರ ಕಚೇರಿಯ ಸಮೇಳನ ಸಭಾಂಗಣದಲ್ಲಿ ಬಿಬಿಎಂಪಿ ಮತ್ತು ಸ್ವಚ್ಛ ಬೆಳಕು ಸಂಸ್ಥೆ ಸಹಯೋಗದಲ್ಲಿ ಹಮಿಕೊಂಡಿದ್ದ ಪೊಲೀಸ್ ಆಯುಕ್ತರ ಕಚೇರಿಯನ್ನು ಶೂನ್ಯ ತ್ಯಾಜ್ಯ ಕಚೇರಿಯಾಗಿ ಪರಿವರ್ತಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಸ ವಿಲೇವಾರಿ ಬಗ್ಗೆ ಗಮನದಲ್ಲಿಟ್ಟುಕೊಂಡು ಕಸವನ್ನು ಪ್ರತಿದಿನ ಪ್ರಜ್ಞೆಯಿಂದ ವಿಲೇವಾರಿ ಮಾಡಿ ನಿಯಮ ಪಾಲಿಸಿದಲ್ಲಿ ಅಂತವರಿಗೆ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದರು. ಇಲಾಖೆಯ ಹಾಗೂ ಠಾಣೆಯ ಸಿಬ್ಬಂದಿಗಳು ಕಸವನ್ನು ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿದವರಿಗೆ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಠಾಣೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಬಾರದೆಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದ ಅವರು, ನಾವು ಕಾರ್ಯಕ್ರಮಗಳನ್ನು ಮಾಡಿ ಪ್ರಶಂಸೆ ಪಡೆಯುವುದರ ಜೊತೆಗೆ ಸ್ವಚ್ಛತೆ ಕಡೆಗೂ ಗಮನ ಹರಿಸಬೇಕೆಂದು ಅವರು ತಿಳಿಸಿದರು.
ಹಸಿ ಕಸ,ಒಣ ಕಸ, ಉಪಯೋಗಕ್ಕೆ ಬಾರದ ಎಲೆಕ್ಟ್ರಾನಿಕ್ಸ್ , ಟ್ಯೂಬ್ಲೈಟ್ನಂತಹ ಮುಂತಾದ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಹಿಸಬೇಕು. ಇಂದಿನಿಂದಲೇ, ಈಗಿನಿಂದಲೇ ಕಸ ವಿಲೇವಾರಿ ಬಗ್ಗೆ ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಅವರು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.