ಲಖನೌ (ಉತ್ತರ ಪ್ರದೇಶ), ಜು.13- ಭಾರೀ ಮಳೆಯಿಂದ ಭೀಕರ ಪ್ರವಾಹಕ್ಕೆ ಸಿಲುಕಿರುವ ಉತ್ತರ ಪ್ರದೇಶ ಸಂಪೂರ್ಣ ನಲುಗಿ ಹೋಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. 700ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿದ್ದು, ನದಿಗಳು ಉಕ್ಕಿ ಹರಿದಿವೆ. ಭಾರೀ ಮಳೆ ಅಬ್ಬರಕ್ಕೆ 11 ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಆರು ಮಂದಿ ಪ್ರವಾಹದ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಸಿಡಿಲು ಮತ್ತು ಹಾವು ಕಡಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಓರ್ವ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, 17 ಜಿಲ್ಲೆಗಳ 732 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಹೊಲ-ಗದ್ದೆಗಳು ನೀರಿನಿಂದ ತುಂಬಿ ಬೆಳೆ ಹಾಳಾಗಿವೆ. ಶಹಜಾನ್‌ಪುರ ಮತ್ತು ಭರೇಲಿಯಾ ನಗರ ಪ್ರದೇಶಗಳಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಶಹಜಾನ್‌ಪುರ ಜಿಲ್ಲೆಯ ಲಖನೌ ಭರೇಲಿಯಾ ಹೆದ್ದಾರಿಯಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳೀಯ ಆಡಳಿತದೊಂದಿಗೆ ಸೇರಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ.
ಜನರಿಗಾಗಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಉತ್ತರ ಪ್ರದೇಶದ 44 ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಬಂಧ, ಚಿತ್ರಕೂಟ, ಕೌಶಂಬಿ ಪ್ರಯಾಗ್‌ರಾಜ್, ಪ್ರತಾಪ್‌ಗಢ್, ಫತೇಪುರ್, ಸೋನಾಭದ್ರ, ಮಿರ್ಜಾಪುರ್, ಚಂದೌಲಿ, ವಾರಣಾಸಿ, ಎಸ್‌ಆರ್ ನಗರ, ಗೋರಖ್‌ಪುರ್, ಅಜಂಗಢ್, ಮಹಾರಾಜ್ ಗಂಜ್, ಮೊರದಾಬಾದ್ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಗೋಮತಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಿಗೆ ನೀರು ನುಗ್ಗಿ ಹೊಲಗದ್ದೆಗಳಲ್ಲಿದ್ದ ಬೆಳೆಗಳೆಲ್ಲ ಜಲಾವೃತಗೊಂಡಿವೆ.