Thursday, September 19, 2024
Homeಇದೀಗ ಬಂದ ಸುದ್ದಿಜು.15ರಿಂದ ವಿಧಾನಮಂಡಲ ಅಧಿವೇಶನ, ವಾಕ್ಸಮರಕ್ಕೆ ವೇದಿಕೆ ಸಜ್ಜು

ಜು.15ರಿಂದ ವಿಧಾನಮಂಡಲ ಅಧಿವೇಶನ, ವಾಕ್ಸಮರಕ್ಕೆ ವೇದಿಕೆ ಸಜ್ಜು

ಬೆಂಗಳೂರು, ಜು.13-ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವು ಜುಲೈ 15ರಿಂದ 26ವರೆಗೆ ನಡೆಯಲಿದೆ. ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು, ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ವಿಳಂಬ, ವಾಲೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ, ಮುಡಾ ಹಗರಣ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸಲಿವೆ.

ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಪ್ರತಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ನಡುವಿನ ವಾಕ್ಸಮರಕ್ಕೆ ಅಧಿವೇಶನ ವೇದಿಕೆಯಾಗಲಿದೆ. ಈಗಾಗಲೇ ವಾಲೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಾಗೂ ಮುಡಾ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ.

ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂಬ ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತ್ತಾ ಬಂದಿವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಪ್ರಮುಖವಾಗಿ ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆಗಳಿವೆ.ಮಳೆ ಹಾನಿಯ ಪರಿಹಾರ ಬಿಡುಗಡೆ ವಿಳಂಬ, ಕಳೆದ ವರ್ಷದ ಬರ ಪರಿಹಾರ ನೀಡಿಕೆ ವಿಳಂಬ, ಡೆಂಘೀ ರೋಗ ಉಲ್ಬಣ, ಹಾಲಿನ ದರ ಏರಿಕೆ ಸೇರಿದಂತೆ ಹಲವು ವಿಚಾರಗಳು ಪ್ರತಿಪಕ್ಷಗಳ ಅಸ್ತ್ರವಾಗಲಿವೆ.

ಆಡಳಿತ ಪಕ್ಷವೂ ಪ್ರತಿಪಕ್ಷಗಳ ಅಸ್ತ್ರಗಳಿಗೆ ತಕ್ಕ ಪ್ರತ್ಯಸ್ತ್ರಗಳನ್ನು ಬಳಸಲು ಸಜ್ಜಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿನ ಲೋಪ-ದೋಷಗಳನ್ನು ಮುಂದಿಟ್ಟುಕೊಂಡು ಪ್ರತಿಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶ ಹೊಂದಿದೆ.

ಅಧಿವೇಶನದ ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಗುತ್ತದೆ. ಬಳಿಕ ಅಧಿಕೃತ ಕಾರ್ಯಕಲಾಪಗಳು ಆರಂಭವಾಗಲಿವೆ. ಮಂಗಳವಾರದಿಂದ ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್‌‍ ಅಧಿವೇಶನದಲ್ಲೂ ಜಂಟಿ ಹೋರಾಟ ನಡೆಸಲು ನಿರ್ಧರಿಸಿವೆ. ಮುಡಾ ಹಗರಣ, ವಾಲೀಕಿ ನಿಗಮದ ಹಗರಣ, ವರ್ಗಾವಣೆ ದಂಧೆ, ಪರಿಶಿಷ್ಟ ಜಾತಿ, ವರ್ಗದ ಹಣ ದುರ್ಬಳಕೆ, ರೈತರ ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಅನೇಕ ವಿಷಯಗಳನ್ನು ಆದ್ಯತೆ ಮೇಲೆ ಸದನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ.

ಬರಗಾಲ ಸಮಸ್ಯೆ, ಮಳೆಯ ಅವಾಂತರ, ಡೆಂಘೀಯಿಂದ ಸಾವನ್ನಪ್ಪಿದವರ ವಿಚಾರ, ಕಾನೂನು ಮತ್ತು ಸುವ್ಯವಸ್ಥೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿಕೆಯಲ್ಲಿನ ವಿಳಂಬ ಸೇರಿದಂತೆ ಹತ್ತಾರು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.

ಹೀಗಾಗಿ ಮಳೆಗಾಲದ ಈ ಅಧಿವೇಶನವು ಹಲವು ಪ್ರಮುಖ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ. 9 ದಿನಗಳ ಕಾಲ ನಡೆಯುವ ವಿಧಾನ ಮಂಡಲದ ಅಧಿವೇಶನವು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

RELATED ARTICLES

Latest News