ಬೆಂಗಳೂರು,ಜು.13- ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಇಂದು ಬಿಎಂಟಿಸಿ (ಕಲ್ಯಾಣ ಕರ್ನಾಟಕ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆ ಪ್ರಕ್ರಿಯೆಯನ್ನು ವೆಬ್ಕಾಸ್ಟಿಂಗ್ ಮೂಲಕ ವೀಕ್ಷಿಸಿದರು.
ಕೆಇಎನಲ್ಲಿ ಅಳವಡಿಸಿರುವ ಟಿವಿ ಪರದೆಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪರೀಕ್ಷಾ ಪ್ರಕ್ರಿಯೆಯ ನೇರ ಪ್ರಸಾರವನ್ನು ಸಚಿವರು ಹಾಗೂ ಅಧಿಕಾರಿಗಳು ವೀಕ್ಷಿಸಿದರು. ಇಂದು ಮತ್ತು ನಾಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕ್ಯಾಮರಾ ಕಣ್ಗಾವಲಿನಲ್ಲಿ ಮೇಲಿನ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುತ್ತಿದೆ.
ಬೆಂಗಳೂರು, ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿ ನಗರಗಳ ಒಟ್ಟು 22 ಕೇಂದ್ರಗಳ, 377 ಕೊಠಡಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮರಾ ಅಳವಡಿಸಿದ್ದು, ಇದೇ ಮೊದಲ ಬಾರಿಗೆ ವೆಬ್ ಕ್ಯಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದು, ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಿದ್ದು, ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಲು ಟಿವಿಗಳನ್ನು ಅಳವಡಿಸಲಾಗಿದೆ. ಮೇಲ್ವಿಚಾರಣೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸ್ವೀಕಾರ ಮತ್ತು ಅದರ ಬಂಡಲ್ ತೆರೆಯುವ ಎಲ್ಲ ಪ್ರಕ್ರಿಯೆಯನ್ನೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಅಲ್ಲದೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರವನ್ನು ತೆಗೆದುಕೊಂಡು ಅಲ್ಲೇ ಅದನ್ನು ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಿರುವ ಚಿತ್ರದ ಜತೆಗೂ ಆನ್ ಲೈನ್ ನಲ್ಲಿ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರದೊ ಹೆಸರಿನಲ್ಲಿ ಇನ್ಯಾರೊ ಪರೀಕ್ಷೆ ಬರೆಯುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆಸಿದ ಡಿಸಿಇಟಿ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಪ್ರಾಂಶುಪಾಲರ ಕಚೇರಿಯಲ್ಲಿನ ಬೆಳವಣಿಗೆಗಳನ್ನು ವೆಬ್ ಕಾಸ್ಟಿಂಗ್ ಮಾಡಿದ್ದು ಯಶಸ್ವಿಯಾದ ನಂತರ ಪರೀಕ್ಷೆ ನಡೆಯುವ ಕೊಠಡಿಯಿಂದಲೂ ವೆಬ್ ಕಾಸ್ಟಿಂಗ್ ಮಾಡಲು ತೀರ್ಮಾನಿಸಲಾಗಿದೆ.
ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೂ ಒಂದೊಂದು ಉಪ ಕಮಾಂಡಿಂಗ್ ಸೆಂಟರ್ ಇದ್ದು, ಅಲ್ಲಿಯೂ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಬೇರೆ ಜಿಲ್ಲೆಗಳ ವಿಶೇಷ ವೀಕ್ಷಕರನ್ನೂ ನಿಯೋಜಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.