Saturday, November 23, 2024
Homeರಾಜ್ಯಸನಾತನ ಧರ್ಮ ಉಳಿಸಲು ಹೋರಾಟ ಅನಿವಾರ್ಯ : ಬಾಲಿ ಸೆನೆಟರ್

ಸನಾತನ ಧರ್ಮ ಉಳಿಸಲು ಹೋರಾಟ ಅನಿವಾರ್ಯ : ಬಾಲಿ ಸೆನೆಟರ್

ಬೆಂಗಳೂರು,ಜು.13– ಹಿಂದೂ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಹೋರಾಟ ನಡೆಸಲು ಮುಂದಾಗುವ ಅವಶ್ಯಕತೆ ಇದೆ ಎಂದು ಬಾಲಿ ಸೆನೆಟರ್(ಸಂಸದ) ಡಾ.ಗುಸ್ತಿ ಆರ್ಯ, ವೇದಕರ್ಣ ಮಹೇಂದ್ರದತ್ತ ವೇದಸ್ವರಪುತ್ರ ಸೂರ್ಯ ಅವರು ಹೇಳಿದ್ದಾರೆ.

ಕರ್ನಾಟಕದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅವರು ಇತ್ತೀಚೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದರು. ಲಿಂಬಾವಳಿಯವರು ಬಾಲಿ ದ್ವೀಪಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಸಂಸದರಾಗಿರುವ ಡಾ. ಗುಸ್ತಿ ಆರ್ಯ ವೇದಕರ್ಣ ಮಹೇಂದ್ರದತ್ತ ವೇದಸ್ವರಪುತ್ರ ಸೂರ್ಯ ಅವರನ್ನು ಭೇಟಿಯಾಗಿ ಕರ್ನಾಟಕ ಹಾಗೂ ಭಾರತದ ರಾಜಕೀಯ ಬೆಳವಣಿಗೆಗಳು, ಶಿಕ್ಷಣ, ಕೈಗಾರಿಕೆ, ಆರೋಗ್ಯ, ಹಿಂದೂ ಧರ್ಮದ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಬಾಲಿಯಲ್ಲಿ 10 ವರ್ಷಗಳ ಹಿಂದೆ ಶೇ.95ರಷ್ಟಿದ್ದ ಹಿಂದೂ ಜನಸಂಖ್ಯೆ ಈಗ ಶೇ.75ಕ್ಕೆ ಇಳಿಕೆಯಾಗಿದೆ. ಕೇವಲ ಒಂದು ದಶಕದ ಅವಧಿಯಲ್ಲಿ ಶೇ.20ರಷ್ಟು ಕುಸಿತ ಕಂಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಡಾ.ಗುಸ್ತಿ ಆರ್ಯ ಅವರು ವಿಷಾದಿಸಿರುವುದಾಗಿ ಲಿಂಬಾವಳಿ ಹೇಳಿದ್ದಾರೆ.

ಭಾರತ ಮತ್ತು ಇಂಡೊನೇಷ್ಯಾ ಸನಾತನ ಧರ್ಮದ ಉಳಿವಿಗಾಗಿ ಹೋರಾಟ ನಡೆಸಬೇಕು. ಧರ್ಮ ಮತ್ತು ಅಧರ್ಮದ ನಡುವೆ ಹೋರಾಟ ನಡೆದರೆ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ. ನಾವು ಯಾವುದೇ ಬೆಲೆ ತೆತ್ತಾದರೂ ಸನಾತನ ಧರ್ಮದ ಉಳಿವಿಗಾಗಿ ಮುಂದಾಗಲೇಬೇಕು. ಈ ನಿಟ್ಟಿನಲ್ಲಿ ಭಾರತದ ಹೋರಾಟಕ್ಕೆ ಇಂಡೊನೇಷ್ಯಾ ಸದಾ ಕೈ ಜೋಡಿಸಲಿದೆ ಎಂದು ಅವರು ಭರವಸೆ ನೀಡಿದ್ದಾಗಿ ಲಿಂಬಾವಳಿ ತಿಳಿಸಿದ್ದಾರೆ.

ಹಿಂದೂ ಧರ್ಮದ ಉಳಿವಿಗಾಗಿ ಇಂಡೋನೇಷ್ಯಾ ಇಟ್ಟುಕೊಂಡಿರುವ ಕಳಕಳಿ ನನಗೆ ಒಂದು ಕ್ಷಣ ಅಚ್ಚರಿ ಮತ್ತು ದಿಗ್ಬ್ರಾಂತಿ ಉಂಟು ಮಾಡಿತು. ಧರ್ಮವನ್ನ ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನುಅಲ್ಲಿನ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಪ್ರವಾಸದ ಸಂದರ್ಭದಲ್ಲಿ ಅನೇಕ ಹಿಂದೂ ಯುವಕರನ್ನು ಭೇಟಿಯಾಗಿ ಮುಕ್ತವಾಗಿ ಚರ್ಚೆ ನಡೆಸಿದೆ. ಸ್ಥಳೀಯ ಜನರು ಹಿಂದೂ ಹೆಸರು ಇಟ್ಟುಕೊಂಡಿದ್ದರೂ ಅವರಿಗೆ ಅದರ ಅರ್ಥ ಮತ್ತು ಮಹತ್ವ ಗೊತ್ತಿಲ್ಲ. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಅವರಿಗೆ ತಿಳಿ ಹೇಳಿದ್ದಾಗಿ ಲಿಂಬಾವಳಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ಧೀಮಂತ ನಾಯಕನಿದ್ದರೂ ದೇಶದಲ್ಲಿ ಬಿಜೆಪಿಯ ಬಲ ಕುಸಿದಿರುವುದು ಪಕ್ಷಕ್ಕೆ ಎಚ್ಚರಿಕೆಯ ಘಂಟೆ. ಇದರಿಂದ ಪಕ್ಷ ಮತ್ತು ಅದರ ನಾಯಕರು ಎಚ್ಚೆತ್ತುಕೊಳ್ಳಬೇಕು ಎಂದು ಗುಸ್ತಿ ಆರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಐಟಿ ರಾಜಧಾನಿಯಾಗಿರುವ ಬೆಂಗಳೂರಿನೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ ವಿಜ್ಞಾನ ಮತ್ತು ಸಾಫ್ಟ್ ವೇರ್ ಕ್ಷೇತ್ರಗಳಲ್ಲಿ ನಾವು ಬಾಲಿಯನ್ನು ಜೋಡಿಸ ಬಯಸುತ್ತೇವೆ, ನಮ್ಮಗೆ ನಿಮ ಸಹಕಾರ ಬಹಳ ಅಗತ್ಯ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಾನು ಅವರನ್ನು ಬೆಂಗಳೂರಿಗೆ ಆಹ್ವಾನಿಸಿದೆ ಮತ್ತು ಅವರು ಸಂತೋಷದಿಂದ ಇಲ್ಲಿಗೆ ಭೇಟಿ ನೀಡಲು ಸಿನೆಟರ್ ಒಪ್ಪಿದರು ಎಂದು ಲಿಂಬಾವಳಿ ತಿಳಿಸಿದರು.

RELATED ARTICLES

Latest News