ಬೆಂಗಳೂರು,ಜ.5- ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕೀರ್ತಿಗೆ ಸಿದ್ದರಾಮಯ್ಯ ಭಾಜನರಾಗಲಿದ್ದಾರೆ. 7 ವರ್ಷ 239 ದಿನಗಳ ಕಾಲ ಆಡಳಿತ ನಡೆಸಿದ್ದ ಡಿ.ದೇವರಾಜ ಅರಸು ಅವರ ನಂತರ ಈಗ ಸಿಎಂ ಸಿದ್ದರಾಮಯ್ಯನವರು ಆ ದಾಖಲೆಯನ್ನು ಮುರಿಯಲಿದ್ದಾರೆ.
ದೇವರಾಜ ಅರಸುರವರು ಸತತವಾಗಿ ಏಳೂವರೆ ವರ್ಷ ಅಧಿಕಾರ ನಡೆಸಿ ಹೊಸ ಕ್ರಾಂತಿ ಸೃಷ್ಟಿಸಿದ್ದರು. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ 5 ವರ್ಷ ಪೂರ್ಣಗೊಳಿಸಿದ್ದರು. ಮತ್ತೆ 2023 ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.
ಕಳೆದ ಎರಡು ದಶಕಗಳಿಂದ ಸತತ ಅಧಿಕಾರದಲ್ಲಿದ್ದ ಚಾಣಾಕ್ಷ ರಾಜಕಾರಣಿ ಎಂಬ ಹಿರಿಮೆಯೂ ಅವರದ್ದಾಗಿದೆ.ಆರಂಭದಲ್ಲಿ ವಕೀಲ ವೃತ್ತಿಯಿಂದ ಸಾರ್ವಜನಿಕ ರಂಗಕ್ಕೆ ಬಂದ ನಂತರ ಹಲವಾರು ಅಡೆತಡೆ ನಡುವೆಯೂ ಮತ್ತು ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷ ನಾಯಕರಾಗಿ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಹಲವು ಭಾಗ್ಯಗಳನ್ನು ನೀಡಿದ ಕೀರ್ತಿ ಅವರದ್ದಾಗಿದೆ.
2023 ರಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ದಾಖಲೆ ಎಂಬಂತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದವರಲ್ಲಿ ಇವರ ಪಾತ್ರವೂ ಕೂಡ ಪ್ರಮುಖವಾಗಿದ್ದು, ಈಗ ರಾಜ್ಯವನ್ನಾಳಿದ ಸಿಎಂಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಮುಟ್ಟಿದೆ.
ದೇವರಾಜ ಅರಸು ಅವರು 7 ವರ್ಷ 239 ದಿನಗಳ ಕಾಲ ಆಡಳಿತ ನಡೆಸಿದ್ದರು. ಈಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಇಂದು ಅದೇ 7 ವರ್ಷ 239 ದಿನ ಪೂರೈಸಿದ್ದಾರೆ. ನಾಳೆ ಅವರು ಹೊಸ ದಾಖಲೆಯನ್ನು ಸೃಷ್ಟಿಸಲಿದ್ದಾರೆ.
2ನೇ ಸ್ಥಾನದಲ್ಲಿ ದೇವರಾಜ ಅರಸುರವರು ಹೋದರೆ, 3ನೇ ಸ್ಥಾನದಲ್ಲಿ ಎಸ್.ನಿಜಲಿಂಗಪ್ಪ (7 ವರ್ಷ 175 ದಿನ), 4ನೇ ಸ್ಥಾನ ರಾಮಕೃಷ್ಣ ಹೆಗ್ಡೆ (5 ವರ್ಷ 216 ದಿನ) ಮತ್ತು 5ನೇ ಸ್ಥಾನ ಬಿ.ಎಸ್.ಯಡಿಯೂರಪ್ಪ (5 ವರ್ಷ 82 ದಿನ) ಇದ್ದಾರೆ.
ಲೋಕದಳ, ಜನತಾದಳದಲ್ಲಿಯೂ ಸಿದ್ದರಾಮಯ್ಯನವರು ತಮ ವರ್ಚಸ್ಸನ್ನು ಪ್ರದರ್ಶಿಸಿದ್ದರು. 2006 ರಲ್ಲಿ ಕಾಂಗ್ರೆಸ್ ಸೇರಿದ ನಂತರ ಅವರು ಹಿಂದೆ ನೋಡಲೇ ಇಲ್ಲ. ಶಾಸಕರಾಗಿ, ವಿಪಕ್ಷ ನಾಯಕರಾಗಿ, ಮುಖ್ಯಮಂತ್ರಿ ಕುರ್ಚಿವರೆಗೂ ಹಲವಾರು ನಾಯಕರನ್ನು ಕಂಡಿದ್ದಾರೆ.
ಪ್ರಸ್ತುತ ಅತಿ ಹೆಚ್ಚು ದಿನಗಳ ಆಡಳಿತ ನಡೆಸಿದ ಕೀರ್ತಿಯ ಜೊತೆಗೆ ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಯೂ ಸಿದ್ದರಾಮಯ್ಯ ಅವರದ್ದಾಗಿದೆ.
ಈಗಾಗಲೇ 16 ಬಜೆಟ್‌ಗಳನ್ನು ಮಂಡಿಸಿರುವ ಅವರು, ಹೊಸಹೊಸ ದಾಖಲೆಗಳಿಗೆ ಪಾತ್ರರಾಗಿ ಪ್ರಭಾವಿ ಅಹಿಂದಾ ನಾಯಕರಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ಈಗ ಹೊಸ ದಾಖಲೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಉತ್ಸಾಹಭರಿತರಾಗಿದ್ದಾರೆ. ಸಿಎಂ ನಿವಾಸದ ಬಳಿ ಶುಭ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಸಂಭ್ರಮ ಮನೆ ಮಾಡಿದೆ.
