ಬೆಂಗಳೂರು,ಜ.5-ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಕ್ರಮತೆಗೆದುಕೊಳ್ಳಲಾಗುವುದೆಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ತೂರಾಟ ನಡೆಸಿರುವವರು 15 ರಿಂದ 16 ವಯೋಮಾನದ ಅಪ್ರಾಪ್ತರೆಂಬುವುದು ಗೊತ್ತಾಗಿದೆ ಎಂದು ವಿವರಿಸಿದರು. ಪೊಲೀಸರ ವಶದಲ್ಲಿರುವ ಅಪ್ರಾಪ್ತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯಾರು ಅವರನ್ನು ಪ್ರಚೋದಿಸಿದ್ದಾರೆ, ಘಟನೆಗೆ ಕಾರಣವೇನು, ಘಟನೆ ಹೇಗೆ ನಡೆಯಿತು ಎಂಬುವುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದೆಂದು ಅವರು ತಿಳಿಸಿದರು.
ಇಂತಹ ಘಟನೆಗಳು ನಡೆದಾಗ ಬಿಜೆಪಿ ರಾಜಕೀಯ ಮಾಡಲು ಪ್ರಯತ್ನಿಸುತ್ತದೆ, ಬಿಜೆಪಿ ಹೇಳಿಕೆ ನೀಡುವ ಮೊದಲೇ ನಾವು ಕಾನೂನಿನ ಪ್ರಕಾರ ಕ್ರಮ ಕೈಗೊಂಡಿದ್ದೇವೆ, ಯಾರ ಪ್ರಚೋದನೆಗೂ ಒಳಗಾಗದೇ ಕಾನೂನು ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಬಳ್ಳಾರಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬಳ್ಳಾರಿ ಎಸ್‌ಪಿ ಪವನ್ ನಜ್ಜೂರು ಅವರನ್ನು ಡಿಜಿಪಿ ಅವರು ಭೇಟಿಗೆ ಸೂಚಿಸಿದ್ದಾರೆ. ಇಂದು ಅವರು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
