Friday, October 18, 2024
Homeರಾಜ್ಯಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ, ರೆಡ್‌ ಅಲರ್ಟ್‌ ಘೋಷಣೆ

ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ, ರೆಡ್‌ ಅಲರ್ಟ್‌ ಘೋಷಣೆ

ಬೆಂಗಳೂರು,ಜು.14- ಕರಾವಳಿ, ಮಲೆನಾಡು, ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಈ ಐದು ಜಿಲ್ಲೆಗಳಲ್ಲೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಆಂಕೋಲ, ಕುಮುಟಾ, ಕಡ್ತ, ಗೇರುಸೊಪ್ಪೆ, ಹೊನ್ನಾವರದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಕೊಡುಗು ಜಿಲ್ಲೆಯ ಬಾಗಮಂಡಲದಲ್ಲಿ ನಿನ್ನೆ ಒಂದೇ ದಿನ 13 ಸೆ.ಮೀ ಮಳೆಯಾಗಿದೆ.

ನಿರಂತರ ಮಳೆಯಿಂದ ಮಲೆನಾಡು, ಕರಾವಳಿ ಭಾಗದಲ್ಲಿ ರಸ್ತೆಗಳೆಲ್ಲ ಜಲಾವೃತವಾಗಿದ್ದು, ಹೊಲಗದ್ದೆಗಳಿಗೂ ನೀರು ತುಂಬಿ ಬೆಳೆಗಳಿಗೂ ಹಾನಿಯಾಗಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನಕ್ಕೆ ಹಲವೆಡೆ ತೊಂದರೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬರುತ್ತಿರುವುದರಿಂದ ಕಬಿನಿ, ಹೇಮಾವತಿ, ಹಾರಂಗಿ, ಕೃಷ್ಣರಾಜಸಾಗರ ಜಲಾಶಯಗಳ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾಗಿ ನೀರು ಸಂಗ್ರಹ ಜಾಸ್ತಿಯಾಗಿದೆ. ಅತ್ತ ಶಿವಮೊಗ್ಗ ಮತ್ತು ಮಲೆನಾಡು ಪ್ರದೇಶಗಳಲ್ಲೂ ನಿರಂತರ ಮಳೆಯಾಗುತ್ತಿರುವುದರಿಂದ ತುಂಗ, ಭದ್ರ ಜಲಾಶಯಗಳಿಗೂ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಗೆ ಇಂದಿನಿಂದ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಧಾರವಾಡ ಜಿಲ್ಲೆಗೆ ನಾಳೆ ಆರೆಂಜ್‌ ಅಲೆರ್ಟ್‌ ಹಾಗೂ ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.ಯಾದಗಿರಿ, ಹಾವೇರಿ, ವಿಜಯಪುರ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲೂ ಕೂಡ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ನಿರಂತರ ಮಳೆಯಾಗುತ್ತಿದ್ದು, ಮತ್ತೆ ಮಳೆ ಹೆಚ್ಚಾಗುವ ಸಂಭವವಿದೆ.

ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ನದಿಪಾತ್ರದ ಜನರು ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಹಗುರ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

RELATED ARTICLES

Latest News