ಬೆಂಗಳೂರು,ಜು.14- ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಇ.ಡಿ ಅಧಿಕಾರಿಗಳು ವಾಲೀಕಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ನಿಗಮದ ಅಕ್ರಮ ಹಣ ವರ್ಗಾವಣೆ ಬಗ್ಗೆ ಬಿ.ನಾಗೇಂದ್ರ ಅವರನ್ನು ಶುಕ್ರವಾರ ಬಂಧಿಸಿದ್ದ ಇ.ಡಿ ಅಧಿಕಾರಿಗಳು ಶನಿವಾರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯ ಆರು ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿದೆ.
ನಾಗೇಂದ್ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಇ.ಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಹಣ ಎಲ್ಲಿಂದ, ಯಾರಿಗೆ ಹೋಯಿತು, ಯಾವುದಕ್ಕೆ ಉಪಯೋಗಿಸಲಾಯಿತು ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಮಾಹಿತಿಗಳನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹಲವು ಪ್ರಶ್ನೆಗಳಿಗೆ ನಾಗೇಂದ್ರ ಅವರು ಉತ್ತರಿಸಿದ್ದು, ಇನ್ನು ಹಲವು ಪ್ರಶ್ನೆಗಳಿಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.