ಬೆಂಗಳೂರು,ಜು.15- ಎಸ್‌ಐಟಿ ತನಿಖೆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಇಂದು ವಿಧಾನಸೌಧದಲ್ಲಿ ಪ್ರತ್ಯಕ್ಷರಾದರು.ಕಲಾಪದಲ್ಲಿ ಭಾಗವಹಿಸಲು ಆಗಮಿಸಿ ಬಸನಗೌಡ ದದ್ದಲ್ ಮುಖ್ಯಮಂತ್ರಿಯವರನ್ನು ವಿಧಾನಸಭೆಯ ಕಾರಿಡಾರ್‌ನಲ್ಲಿರುವ ಕಚೇರಿಯಲ್ಲಿ ಭೇಟಿ ಮಾಡಿ ವಿವರಣೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಐಟಿ ತನಿಖೆಯ ಬಗ್ಗೆ ಬಸನಗೌಡ ದದ್ದಲ್‌ಮುಖ್ಯಮಂತ್ರಿಯವರಿಗೆ ವಿವರಣೆ ನೀಡಿದ್ದು, ತಾವು ಎರಡು-ಮೂರು ದಿನಗಳಿಂದ ಎಲ್ಲಿದ್ದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಂತರ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಬಸನಗೌಡ ದದ್ದಲ್‌ಭೇಟಿಯಾಗಿದ್ದು, ಶುಕ್ರವಾರ ಎಸ್‌ಐಟಿ ವಿಚಾರಣೆ ಬಳಿಕ ತಾವು ಊರಿಗೆ ತೆರಳಿದ್ದು, ಮನೆಯಲ್ಲಿಯೇ ಇದ್ದಿದ್ದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ತಾವು ಎಲ್ಲಿಯೂ ಹೋಗಿಲ್ಲ. ತಲೆ ಮರೆಸಿಕೊಂಡೂ ಇಲ್ಲ. ಬಿಜೆಪಿಯವರು ಅನಗತ್ಯವಾಗಿ ತಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ನಂತರ ಕಲಾಪದಲ್ಲಿಯೂ ಭಾಗವಹಿಸಿದ್ದಾರೆ.
ಇದಕ್ಕೂ ಮುನ್ನ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ದದ್ದಲ್, ಎಲ್ಲಾ ಪ್ರಶ್ನೆಗಳಿಗೂ ವಿಧಾನಸಭೆಯಲ್ಲಿಯೇ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.ನಾನು ಕಲಾಪದಲ್ಲಿ ಭಾಗವಹಿಸುತ್ತಿದ್ದೇನೆ, ಅಲ್ಲಿಯೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದರು.