ಬೆಂಗಳೂರು,ಜು.15- ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ತಮೊಂದಿಗೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮ ಜೀವನದುದ್ದಕ್ಕೂ ಹಿಟ್ ಅಂಡ್ ರನ್ ರೀತಿಯಲ್ಲೇ ವರ್ತಿಸುತ್ತಿದ್ದಾರೆ. ಅವರು ಮಾಡಿದ ಆರೋಪಗಳಿಗೆ ಬದ್ಧತೆ ಇದ್ದರೆ ವಿಧಾನಸೌಧದ ಕಲಾಪದಲ್ಲಿ ಬಂದು ಚರ್ಚೆ ಮಾಡಬೇಕಿತ್ತು. ಅವರ ಪಕ್ಷದ ಶಾಸಕರು ಬಂದು ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ನೇರವಾಗಿ ತಮೊಂದಿಗೆ ಚರ್ಚೆಗೆ ಬರಲಿ. ಇಲ್ಲವಾದರೇ ಯಾವುದೇ ವಾಹಿನಿಯಲ್ಲಿ ಚರ್ಚೆಗೆ ಕರೆದರೂ ನಾನು ಸಿದ್ಧ. ಅನಗತ್ಯವಾಗಿ ಹಿಟ್ ಅಂಡ್ ರನ್ ಆರೋಪ ಮಾಡಿ ಓಡಿಹೋಗಲಾಗುತ್ತಿದೆ. ಕಿಂಗ್ ಆಫ್ ಕರೆಕ್ಷನ್ ಯಾರು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.