ಬೆಂಗಳೂರು,ಜು.15-ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನಡೆದಿರುವ ಬಹುಕೋಟಿ ಹಗರಣ ಕುರಿತು ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಪಕ್ಷ ಬಿಜೆಪಿ ವಿಧಾನಪರಿಷತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸಿತು. ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ನಿಯಮ 59ರಡಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು.
ಇದು ಬಹುದೊಡ್ಡ ಹಗರಣವಾಗಿರುವುದರಿಂದ ದಿನದ ಕಲಾಪವನ್ನು ಬದಿಗೊತ್ತಿ ಚರ್ಚೆಗೆ ಅವಕಾಶ ಮಾಡಿಕೊಡಿ. ಇದೊಂದು ಬ್ರಹಾಂಡ ಭ್ರಷ್ಟಾಚಾರ. ಅಹಿಂದ ನಾಯಕರು ಎಂದುಕೊಂಡವರ ಅಡಿಯಲ್ಲೇ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಆಗ ಸಭಾಪತಿಗಳು ಸದನವನ್ನು ನಿಯಮಗಳ ಪ್ರಕಾರ ನಡೆಸಬೇಕು, ನೀವು ನೋಟಿಸ್ ನೀಡಿರುವುದು ನಮ ಗಮನಕ್ಕೆ ಬಂದಿದೆ. ಮೊದಲು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಬೇಕು. ನಂತರ ನಿರ್ಧರಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಎನ್.ರವಿಕುಮಾರ್ ಅವರು ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಿಂದ ಬಳ್ಳಾರಿ ಲೋಕಸಭೆ ಚುನಾವಣೆಗೆ ಎಷ್ಟು ಹಣ ಹೋಗಿದೆ? ತೆಲಂಗಾಣಕ್ಕೆ ಎಷ್ಟು ಹಣ ಹೋಗಿದೆ ಇದರ ಬಗ್ಗೆ ಚರ್ಚೆಯಾಗಬೇಕೆಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಅವರು ನಿಮದು ಸಾವಿರಾರು ಕೋಟಿ ಭ್ರಷ್ಟಾಚಾರದ ಬಗ್ಗೆ ನಮ ಬಳಿಯೂ ದಾಖಲೆಗಳಿವೆ. ಸಭಾಪತಿಗಳು ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಹೇಳಿದ ಮೇಲೆ ಚರ್ಚೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಗಲಾಟೆ ನಡುವೆಯೇ ಸಭಾಪತಿಯವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.