ಬೆಂಗಳೂರು,ಜು.15- ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶಾನ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ರಾಜು ಕಾಗೆ ಅವರು, ಪೆಟ್ರೋಲ್, ಡೀಸೆಲ್ ದರದ ಏರಿಕೆ ನಂತರ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ.
ಈಗ ಈ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಹೇಳಿಕೆಗೆ ಸಚಿವರು ಅಸಮತಿ ಸೂಚಿಸಿದರು.ಅಧ್ಯಕ್ಷರಾಗಿ ಅವರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಆದರೆ ಸಚಿವನಾಗಿ ನನ್ನ ಮುಂದೆ ಯಾವುದೇ ಪ್ರಸ್ತಾಪಗಳಿಲ್ಲ. ಒಂದು ವೇಳೆ ಅಂತಹ ಪ್ರಸ್ತಾಪಗಳು ಬಂದರೆ ಪರಿಶೀಲಿಸುವುದಾಗಿ ಹೇಳಿದರು. ಈ ಮೂಲಕ ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾಪವನ್ನು ಸಚಿವರು ತಳ್ಳಿ ಹಾಕಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲೆ ಮಾರಾಟ ತೆರಿಗೆ ಏರಿಕೆ ಮಾಡಿದ ಬಳಿಕ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಬಿಜೆಪಿಯವರು ಹೇಳುತ್ತಿರುವಂತಹ ಹಗರಣ ನಡೆದಿರುವುದು 2021 ರಲ್ಲಿ. ಆಗ ಮುಖ್ಯಮಂತ್ರಿಯಾಗಿದ್ದುದು ಬಿ.ಎಸ್.ಯಡಿಯೂರಪ್ಪ ಅವರು. ಸಾರಿಗೆ ಸಚಿವರು, ಮುಡಾ ಅಧ್ಯಕ್ಷರಾಗಿದ್ದವರೂ ಕೂಡ ಬಿಜೆಪಿ ನಾಯಕರು. ಸಿದ್ದರಾಮಯ್ಯನವರು ತಮ್ಮ ಜಮೀನಿಗೆ ಪರಿಹಾರ ಕೇಳಿದ್ದಾರೆ. ಬಿಜೆಪಿಯವರು ನಿಯಮ ಬಾಹಿರವಾಗಿ ನಿವೇಶನಗಳನ್ನು ಕೊಟ್ಟಿದ್ದರೆ ಅದು ಅವರೇ ಮಾಡಿದ ತಪ್ಪು. ಅದಕ್ಕೆ ನಮ್ಮ ಸರ್ಕಾರ ಹೊಣೆಯಲ್ಲ ಎಂದರು.
ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯಾವುದೇ ಆರೋಪಗಳು ಕೇಳಿಬಂದರೂ ತನಿಖೆ ನಡೆಸುತ್ತಿದ್ದೇವೆ. ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಹಗರಣದಲ್ಲಿ ಎಸ್ಐಟಿ ತನಿಖೆಗೆ ವಹಿಸಲಾಗಿದೆ. ಮುಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್ಐ, ಎಂಜಿನಿಯರಿಂಗ್, ಕೆಇಬಿ ಹುದ್ದೆಗಳ ನೇಮಕಾತಿಗೆ ಹಗರಣಗಳಾಗಿದ್ದವು. ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್ ಸೇರಿದಂತೆ ನಾನಾ ಹಗರಣಗಳಾಗಿದ್ದವು. ಬಿಜೆಪಿ ಇದ್ಯಾವುದನ್ನೂ ತನಿಖೆಗೆ ಒಪ್ಪಿಸಲಿಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿದೆ. ಅದಕ್ಕಾಗಿ ಯಾವುದೇ ಆರೋಪ ಕೇಳಿಬಂದರೂ ತನಿಖೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.
ಶೇ.40 ಹಗರಣಕ್ಕೆ ಸಾಕ್ಷಿ ಇರುವುದಿಲ್ಲ. ಒಂದು ವೇಳೆ ಸಾಕ್ಷಿ ಕೊಡಬೇಕೆಂದಾದರೂ ನ್ಯಾಯಾಲಯದಲ್ಲಿ ವಿಚಾರಣೆಯಾಗಬೇಕು, ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಬೇಕು, ಅನಂತರ ಸಾಕ್ಷಿಯನ್ನು ಸಲ್ಲಿಸಬಹುದು ಎಂದರು.