Friday, April 4, 2025
Homeರಾಜ್ಯಅಂಕೋಲಾ :ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು 7 ಮಂದಿ ದುರ್ಮರಣ, ತುರ್ತು ರಕ್ಷಣಾ ಕಾರ್ಯ

ಅಂಕೋಲಾ :ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು 7 ಮಂದಿ ದುರ್ಮರಣ, ತುರ್ತು ರಕ್ಷಣಾ ಕಾರ್ಯ

ಬೆಂಗಳೂರು,ಜು.16- ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ರೌದ್ರ ನರ್ತನಕ್ಕೆ ಅಂಕೋಲ ತಾಲ್ಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿದಿದ್ದು, ಏಳು ಮಂದಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ.

ಇನ್ನು ಹಲವರು ಮಣ್ಣನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಹೆದ್ದಾರಿ 66 ಸಮೀಪದ ಹೋಟೆಲ್‌ವೊಂದರ ಬಳಿ ಎಲ್‌ಪಿಜಿ ಟ್ಯಾಂಕರ್‌ ನಿಲ್ಲಿಸಿಕೊಂಡು ಟೀ ಕುಡಿಯುತ್ತಿದ್ದ ವೇಳೆ ಗುಡ್ಡ ಕುಸಿತ ಉಂಟಾಗಿ ಟ್ಯಾಂಕರ್‌ನ ಚಾಲಕ ಮತ್ತು ಕ್ಲೀನರ್‌ ಸೇರಿದಂತೆ 9 ಮಂದಿ ಮಣ್ಣಿನಡಿ ಸಿಲುಕಿದ್ದಾರೆ. ಇದರಲ್ಲಿ ಏಳು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಉತ್ತರಕನ್ನಡ ಲೋಕಸಭಾ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಏಳು ಮಂದಿ ದುರ್ಮರಣಕ್ಕೀಡಾಗಿದ್ದು, ಮಣ್ಣಿನಡಿ ಸಿಲುಕಿರುವ ಇನ್ನಿಬ್ಬರು ಬದುಕಿರುವ ಸಾಧ್ಯತೆ ಕ್ಷೀಣಿಸಿದೆ. ಅವರನ್ನು ಹೊರತೆಗೆಯಲು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.ಮಣ್ಣಿನಡಿ ಸಿಲುಕಿರುವ ಮೃತದೇಹಗಳನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ಹೊರತೆಗೆಯುತ್ತಿದ್ದಾರೆ.

ಹೆದ್ದಾರಿ ಸಂಚಾರ ಬಂದ್‌:
ಗುಡ್ಡ ಕುಸಿತದಿಂದಾಗಿ ಅಂಕೋಲ ಹೆದ್ದಾರಿಯಲ್ಲಿ ಸಂಚಾರ ಬಂದ್‌ ಆಗಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಂತಿವೆ. ಉತ್ತರಕನ್ನಡದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನಗರದಲ್ಲಿರುವ ಕೆಎಸ್‌‍ಆರ್‌ಟಿಸಿ ಬಸ್‌‍ ಡಿಪೋ ಜಲಾವೃತವಾಗಿದ್ದು, 50ಕ್ಕೂ ಹೆಚ್ಚು ಬಸ್‌‍ಗಳು ಮುಳುಗಡೆಯಾಗಿ ಪ್ರಯಾಣಿಕರಿಗೆ ಅಡಚಣೆಯಾಗಿದೆ.

ಅಬ್ಬುವಾಡ ರಸ್ತೆಯಲ್ಲಿನ ಡಿಪೋದಲ್ಲಿದ್ದ ಬಸ್‌‍ಗಳನ್ನು ಹೊರ ತೆಗೆಯಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ಚರಂಡಿ ನೀರು ಡಿಪೋಗೆ ನುಗ್ಗಿದ ಪರಿಣಾಮ ಸಮಸ್ಯೆಯಾಗಿದೆ. ಹೊನ್ನಾವರ, ಬಾಸ್‌‍ಕೆರೆ , ಹೊರ್ನೆಕೆರೆ ಬಳಿ ಗುಡ್ಡ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 69ರಲ್ಲಿ ತಾತ್ಕಾಲಿಕವಾಗಿ ಸಂಚಾರ ಬಂದ್‌ ಮಾಡಲಾಗಿದೆ. ನೂರಾರು ವಾಹನಗಳು ನಿಂತಲ್ಲಿಯೇ ನಿಂತಿದ್ದವು.

RELATED ARTICLES

Latest News