ಬೆಂಗಳೂರು,ಜು.16- ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ, ಆರೋಪಿಗಳಾದ ಅಮಿತ್ ದಿಗ್ವೇದ್‌ಕರ್, ಕೆ.ಟಿ.ನವೀನ್‌ಕುಮಾರ್, ಎಚ್.ಎಲ್.ಸುರೇಶ್‌ಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿಗಳು ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದ ವಿಚಾರಣೆ ಮುಗಿಯದೇ ಇರುವುದರಿಂದ ದೀರ್ಘಕಾಲ ಅವರನ್ನು ಜೈಲಿನಲ್ಲಿ ಇಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ, ಜಾಮೀನು ಮಂಜೂರು ಮಾಡಿದೆ.
ಹಿರಿಯ ವಕೀಲ ಅರುಣ್ ಶಾಮ್, ಮಧುಕರ್ ದೇಶಪಾಂಡೆ, ಬಸವರಾಜ್ ಸಪ್ಪಣ್ಣನವರ್ ಆರೋಪಿಗಳ ಪರ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಈ ಹಿಂದೆ ಆರೋಪಿ ಎ11 ಮೋಹನ್ ನಾಯಕ್‌ಗೆ ಮಾತ್ರ ಜಾಮೀನು ದೊರೆತಿತ್ತು.