ಬೆಂಗಳೂರು,ಜು.16- ರಾಜ್ಯದ ಜನತೆಯ ಹಿತದೃಷ್ಟಿ ಮತ್ತು ಭವಿಷ್ಯದ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಸ್ಥಳದಲ್ಲಿ 2ನೇ ಅಂತಾರಾಜ್ಯ ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನಪರಿಷತ್ಗೆ ತಿಳಿಸಿದರು.
ಸದಸ್ಯ ನವೀನ್ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿ, ಗೋವಾ, ಮುಂಬೈನಲ್ಲಿ ಈಗಾಗಲೇ 2ನೇ ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸ್ಥಾಪನೆ ಮಾಡುವುದಾಗಿ ಹೇಳಿದರು.
ಬೆಂಗಳೂರಿನ ಸುತ್ತಮುತ್ತ ಏಳೆಂಟು ಕಡೆ ಸ್ಥಳಗಳನ್ನು ಗುರುತಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಽಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗುವುದು. ಇಂತಹ ಸ್ಥಳದಲ್ಲೇ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕೆಂಬ ಒತ್ತಡವಿದೆ. ನಾನು ಯಾವುದೇ ಒತ್ತಡಕ್ಕೂ ಬಗ್ಗದೆ ಸೂಕ್ತ ಸ್ಥಳದಲ್ಲಿ ರಾಜ್ಯದ ಹಿತದೃಷ್ಟಿ ಮತ್ತು ಭವಿಷ್ಯದ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದರು.
ಪ್ರಸ್ತುತ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2035ಕ್ಕೆ 110 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ತಲುಪುತ್ತದೆ. ಅದೇ ರೀತಿ ಸರಕು ಸಾಗಾಣಿಕೆಯಲ್ಲಿ 110 ಟನ್ ತಲುಪಲಿದೆ. ನಾವು 2033ರೊಳಗೆ 2ನೇ ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡಬೇಕಿದೆ ಎಂದರು.
ತುಮಕೂರು, ಚಿತ್ರದುರ್ಗ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹೀಗೆ ಹಲವಾರು ಕಡೆ ವಿಮಾನ ನಿಲ್ದಾಣ ಸ್ಥಾಪನೆಗೆ ಒತ್ತಡವಿದೆ. ಯಾವುದೇ ಒಂದು ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡಬೇಕಾದರೆ ಕೆಲವು ಮಾನದಂಡಗಳಿವೆ ಎಂದು ಮಾಹಿತಿ ನೀಡಿದರು.
ಮೊದಲ ಸುತ್ತಿನ ಸಭೆಯಲ್ಲಿ ಏಳೆಂಟು ಸ್ಥಳಗಳನ್ನು ಗುರುತಿಸಿದ್ದೇವೆ. ಅದು ಅಂತಿಮಗೊಂಡಿಲ್ಲ. ಬೆಂಗಳೂರು ಸುತ್ತಮುತ್ತ ಸ್ಥಾಪನೆ ಮಾಡುವುದಂತೂ ಖಚಿತ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಪಾಟೀಲ್ ಪುನರುಚ್ಚಿಸಿದರು. ಇದಕ್ಕೂ ಮುನ್ನ ಸದಸ್ಯ ನವೀನ್ ಅವರು, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡುವುದಾದರೆ ಚಿತ್ರದುರ್ಗ, ತುಮಕೂರು ಮಧ್ಯ ಭಾಗದಲ್ಲಿ ಮಾಡಬೇಕೆಂದು ಮನವಿ ಮಾಡಿದರು.