ಬೆಂಗಳೂರು,ಜು.16- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮವಾಗಿ ದುರುಪಯೋಗವಾಗಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿಂದು ಒತ್ತಾಯಿಸಿದರು.
ನಿಯಮ 69ರಡಿ ಚರ್ಚೆ ನಡೆಸಿದ ಅವರು, ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ದುರುಪಯೋಗವಾಗಿರುವುದರ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಈ ಆರೋಪದಲ್ಲಿ ಕಾನೂನು ವಿಚಾರ ಏನೇ ಇದ್ದರೂ ಬದಿಗಿರಿಸಿ ದಲಿತರ ಹಣ ದುರ್ಬಳಕೆಯಾಗಿರುವುದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಆಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.
ಈ ಹಣ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗವಾಗಿರುವುದರ ಹೊಣೆಯನ್ನು ಯಾರೂ ಹೊತ್ತ್ತುಕೊಳ್ಳಲು ಸಿದ್ಧರಿಲ್ಲ. ಸಮಾಜಕಲ್ಯಾಣ ಇಲಾಖೆ ನಮ್ಮಗೆ ಸಂಬಂಽಸಿದ್ದಲ್ಲ ಎಂದು ಹೇಳಿದೆ. ಹಣಕಾಸು ಇಲಾಖೆ ನಾವು ಹಣ ಕೊಟ್ಟಿದ್ದೇವೆ. ನಮ್ಮಗೇನೂ ಗೊತ್ತಿಲ್ಲ ಎಂದಿದೆ. ಮುಖ್ಯಮಂತ್ರಿಯವರು ಹಣ ಕೊಟ್ಟಿದ್ದೇವೆ, ನಮ್ಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹೀಗೆ ಒಬ್ಬರ ಮೇಲೆ ಇನ್ನೊಬ್ಬರು ವರ್ಗಾಯಿಸುತ್ತಿದ್ದಾರೆ. ಯಾರೂ ಅದರ ಹೊಣೆ ಹೊರುತ್ತಿಲ್ಲ. ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ? ಸರ್ಕಾರ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಹೀಗಾಗಿ ಹಣ ಮಂಜೂರಾಗುವುದು, ಹಣ ಖರ್ಚಾಗುವುದು ಎಲ್ಲದರ ಮಾಹಿತಿ ಇರುತ್ತದೆ. ಇಲ್ಲದಿದ್ದರೆ ಕೇಳಬೇಕಲ್ಲವೇ? ಆ ಇಲಾಖೆಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಯೂ ಮಾತನಾಡಲಿಲ್ಲ ಎಂದು ಟೀಕಿಸಿದರು.
ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಶಾಸಕರು ದಲಿತರ ಮತದಾನದಿಂದ ಗೆದ್ದಿದ್ದೇವೆ. ದಲಿತರ ಹಣವನ್ನೇ ಹೊಡೆಯಬೇಕಿತ್ತೇ? ಯಾವ ಮುಖವಿಟ್ಟುಕೊಂಡು ಮತ ಕೇಳೋಣ, ಲಿಂಗಾಯತರ, ಒಕ್ಕಲಿಗರ, ಬ್ರಾಹ್ಮಣರ ನಿಗಮದ ಹಣ ಹೊಡೆಯಬಾರದಿತ್ತೇ? ಅವರು ಶ್ರೀಮಂತರು. ದಲಿತರ ಹಣ ಲೂಟಿಯಾಗಿದೆ ಎಂದು ಮಾತನಾಡಿಕೊಂಡಿದ್ದಾರೆ ಎಂದರು.
ಲಾನುಭವಿಗಳಿಗೆ ಸಿಗಬೇಕಾದ ಹಣ ತೆಲಂಗಾಣಕ್ಕೆ ಹೋಗಿದೆ. ಯಾರನ್ನು ಗುರಿ ಮಾಡುತ್ತೀರ? ಯಾರು ರಾಜೀನಾಮೆ ಕೊಡುತ್ತಾರೆ? 224 ಕ್ಷೇತ್ರದ ಮತದಾರರಿಗೆ ತಲುಪಬೇಕಾದ ಹಣ ದುರ್ಬಳಕೆಯಾಗಿದೆ. ದಲಿತರ ಬದುಕಿಗೆ ಸರ್ಕಾರ ಕೊಳ್ಳಿ ಇಟ್ಟಿದೆ. ಶೋಷಿತ ಸಮುದಾಯದ ಹಣ ಲೂಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಯವರಿಗೆ ಹಾಗೂ ಸಚಿವರಿಗೆ ವಿನಂತಿ ಮಾಡುತ್ತೇನೆ. ಎಸ್ಟಿ ಜನಾಂಗದವರ ಮನೆಯಲ್ಲಿ ಒಂದು ದಿನ ವಾಸ್ತವ್ಯ ಮಾಡಿ, ಅವರ ಕಷ್ಟ, ಗೋಳು ನಿಮಗೆ ಗೊತ್ತಾಗುತ್ತದೆ. ಆರ್ಟಿಜಿಎಸ್, ಗೂಗಲ್ಪೇ ಹೀಗೆ ಅವರ ಹಣವನ್ನು ಲೂಟಿ ಮಾಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅವರ ಕುಟುಂಬ ಬೀದಿಗೆ ಬಂದಿದೆ.
ಸಚಿವರಾದ ಮಧುಬಂಗಾರಪ್ಪ ಹಾಗೂ ಪರಮೇಶ್ವರ ಅವರು ಸಾಂತ್ವನ ಹೇಳಿದ್ದಾರೆ. ಮತ್ತ್ಯಾರೂ ಬಂದಿಲ್ಲ ಎಂದು ಚಂದ್ರಶೇಖರನ್ ಕುಟುಂಬದವರು ಹೇಳಿದ್ದಾರೆ. ಜೀವ ಒತ್ತೆಯಿಟ್ಟಾದರೂ ನ್ಯಾಯ ಪಡೆಯುವುದಾಗಿ ಚಂದ್ರಶೇಖರನ್ ಅವರ ಪತ್ನಿ ಹೇಳಿದ್ದಾರೆ. ಅನ್ಯಾಯವಾಗಿ ಅಮಾಯಕರ ಸಾವಾಗಿದೆ ಎಂದು ತಮ್ಮದೇ ಆದ ಧಾಟಿಯಲ್ಲಿ ವಾಗ್ದಾಳಿ ನಡೆಸಿದರು.
ಒಂದು ವೇಳೆ ಚಂದ್ರಶೇಖರನ್ ಆತ್ಮಹತ್ಯೆ ನಡೆಯದಿದ್ದರೆ ಗೋವಾದಲ್ಲಿ 187 ಕೋಟಿ ರೂ.ಗೂ ಬಿಲ್ ತಯಾರಿಸುತ್ತಿದ್ದರು. ವಾಲ್ಮೀಕಿ ಜನಾಂಗದ ಶಾಪ ನಿಮಗೆ ತಟ್ಟಬಾರದು ಎಂದಿದ್ದರೆ ಕೂಡಲೇ ಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿ. ಅಕ್ರಮ ಹಣ ವರ್ಗಾವಣೆ ಬಗ್ಗೆ ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದರು.