Friday, November 22, 2024
Homeರಾಜ್ಯಇನ್ನೊಂದು ತಿಂಗಳಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ

ಇನ್ನೊಂದು ತಿಂಗಳಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ

ಬೆಂಗಳೂರು,ಜು.16- ಇನ್ನೊಂದು ತಿಂಗಳಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರುವುದಾಗಿ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸುರೇಶ್‌ ಎಚ್‌.ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸಿತಾಣಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 26 ದೇವಾಲಯಗಳಿದ್ದು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಂರಕ್ಷಿತ ಸಾರಕಗಳಲ್ಲಿ ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಸೇರಿವೆ. ಬೇಲೂರು, ಹಳೇಬೀಡು ದೇವಾಲಯಗಳಂತೆ ಶಿಲ್ಪಕಲೆ ಇರುವ 21 ಪ್ರಾಚೀನ ದೇವಾಲಯಗಳಿವೆ.

ಬೇಲೂರು, ಹಳೇಬೀಡಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇನ್ನಷ್ಟು ಮೂಲಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.ಹಳೇಬೀಡು ಹೊಯ್ಸಳೇಶ್ವರ ದೇವಾಲಯ ಹಾಗೂ ಸುತ್ತಮುತ್ತಲಿನ ಶಿಲ್ಪಕಲೆಗಳ ದೇವಾಲಯಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ರಾತ್ರಿ ವೇಳೆ ತಂಗಲು ಯಾತ್ರಿ ನಿವಾಸ ನಿರ್ಮಿಸಲಾಗಿದೆ ಎಂದರು.

ಪ್ರವಾಸೋದ್ಯಮ ಮೂಲಭೂತ ಸೌಕರ್ಯ ವೆಚ್ಚದಡಿಯಲ್ಲಿ 20 ಕೋಟಿ ರೂ.ಗಳ ಪೈಕಿ 16 ಕೋಟಿ ರೂ.ಗಳನ್ನು ಮುಂದುವರೆದ ಕಾಮಗಾರಿಗಳಿಗೆ 4 ಕೋಟಿ ರೂ.ಗಳನ್ನು ನೂತನ ಕಾಮಗಾರಿಗಳಿಗೆ ಕೈಗೊಳ್ಳಲಾಗುವುದು. ಮೂಲ ಸೌಲಭ್ಯ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಶಾಸಕ ಗುರುಮೇಸುರೇಶ್‌ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಡುಪಿ ಜಿಲ್ಲೆಯ ಕಾಪು ಲೈಟ್‌ಹೌಸ್‌‍ ಬೀಚ್‌ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಒಂದು ಜಿಲ್ಲೆಯಲ್ಲಿ ಒಂದು ತಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಹಣ ಮಂಜೂರು ಮಾಡಲಾಗಿದೆ. ಮತ್ತೊಂದು ಬೀಚ್‌ ಅಭಿವೃದ್ಧಿಪಡಿಸಲು ಅನುದಾನದ ಸಮಸ್ಯೆ ಇದೆ. ಎರಡರಲ್ಲಿ ಯಾವುದಾದರೊಂದು ತಾಣ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅದನ್ನೇ ಶಾಸಕರೇ ನಿರ್ಧಾರ ಮಾಡಬೇಕು ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧ
ಪ್ರವಾಸೋದ್ಯಮ ಅಭಿವೃದ್ಧಿಗೆ 2024-25ನೇ ಸಾಲಿನಲ್ಲಿ 23,930.40 ಲಕ್ಷ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್‌‍ ಶಾಸಕ ನರೇಂದ್ರ ಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದರಿ ಅನುದಾನದಲ್ಲಿ ರಾಜ್ಯದ ವಿವಿಧ ಪ್ರವಾಸಿತಾಣಗಳಲ್ಲಿ ಯಾತ್ರಿನಿವಾಸ, ಡಾರ್ಮಿಟರಿ, ಶೌಚಾಲಯ, ಅಂತಿಮ ಹಂತದ ಕೂಡು ರಸ್ತೆ, ಮೆಟ್ಟಿಲುಗಳು, ರೇಲಿಂಗ್‌್ಸ, ಕುಡಿಯುವ ನೀರಿನ ಸೌಲಭ್ಯ, ಸ್ನಾನಗೃಹ, ಸಾರಕಗಳ ಸಂರಕ್ಷಣೆ ಇತ್ಯಾದಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ನೂತನ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯಡಿ 3071.64 ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದ್ದು, ಈವರೆಗೂ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ. ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಮಾಜಕಲ್ಯಾಣ ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.

ಮಳವಳ್ಳಿ ಕ್ಷೇತ್ರದ ಬಸವನಬೆಟ್ಟ ಮತ್ತು ಶಿವನಸಮುದ್ರ ಸುತ್ತಮುತ್ತ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಒತ್ತಾಯಿಸಿದರು. ಈ ಬಗ್ಗೆ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

RELATED ARTICLES

Latest News