ಚಿಕ್ಕಮಗಳೂರು,ಜು.17- ಧಾರಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜು. 22 ರವರೆಗೆ ಸೀತಾಳಯ್ಯನಗಿರಿ ಹಾಗೂ ಮುಳ್ಳಯ್ಯನಗಿರಿ ಪ್ರದೇಶಕ್ಕೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಅಲ್ಲಲ್ಲಿ ಗುಡ್ಡ ಕುಸಿತದ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿಯಾಗುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸ ಮುಂದೂಡಿ :
ಜಿಲ್ಲೆಯ ಮಲೆನಾಡ ಭಾಗದಲ್ಲಿ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಪ್ರವಾಸಿಗರು ತಾತ್ಕಾಲಿಕವಾಗಿ ತಮ ಪ್ರವಾಸ ಮುಂದೂಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಹೋಂಸ್ಟೇ, ರೆಸಾರ್ಟ್ ಮಾಲೀಕರು, ಅರಣ್ಯ ಇಲಾಖೆ ಹಾಗೂ ಇತರರು ಕೈಗೊಳ್ಳುವ ಟ್ರಕಿಂಗ್ ಮುಂದೂಡುವಂತೆಯೂ ಸೂಚಿಸಿದ್ದಾರೆ.
ತುಂಗಾ ನದಿಯಲ್ಲಿ ಪ್ರವಾಹ :
ಶೃಂಗೇರಿಯಲ್ಲಿ ನಿನ್ನೆ ಒಂದೇ ದಿನ ಬಾರಿ ಮಳೆ ಸುರಿದಿದ್ದರಿಂದ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ. ಶೃಂಗೇರಿಯಲ್ಲಿ ಇಲ್ಲಿಯವರೆಗೆ 138 ಸೆಂ.ಮೀ ಮಳೆಯಾಗಿದೆ. ಶೃಂಗೇರಿಯಲ್ಲಿ 16.5 ಸೆಂ.ಮೀ, ಕಿಗ್ಗಾದಲ್ಲಿ 25.7 ಸೆಂ.ಮೀ, 28 ಸೆಂ.ಮೀ ಮಳೆಯಾಗಿದೆ.
ಭೀಕರ ಮಳೆಯಿಂದ ಶೃಂಗೇರಿಯಿಂದ ಮಂಗಳೂರು ಮಾರ್ಗವಾದ ನೆಮಾರ್‌ನಲ್ಲಿ ರಸ್ತೆ ನೀರಿನಿಂದ ಆವೃತಗೊಂಡು ರಸ್ತೆ ಸಂಚಾರ ಸ್ಥಗಿತ ಗೊಂಡಿದೆ. ಶೃಂಗೇರಿಯಲ್ಲಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.
ವ್ಯಾಪಾರ ಕುಂಠಿತ :
ಪಟ್ಟಣದಲ್ಲಿ ಭಾರಿ ಮಳೆಯಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪರ ವಹಿವಾಟು ಕಡಿಮೆ ಆಗಿದೆ.
ಜನರ ಸ್ಥಳಾಂತರ :
ಬಾರಿ ಮಳೆಯಿಂದ ಕುರಬಕೇರಿ ಮತ್ತು ಗಾಂಧಿ ಮೈದಾನದ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದ್ದು ಅಲ್ಲಿರುವ ಜನರನ್ನು ಮತ್ತೊಂದು ಜಾಗಕ್ಕೆ ವರ್ಗಾಯಿಸಲಾಗಿದೆ.
ಆತಂಕ ಬೇಡ :
ಪ್ರವಾಹದಿಂದ ಯಾರು ದಿಕ್ಕೆಡಬಾರದೆಂದು ತಹಶೀಲ್ದಾರ್ ಗೌರಮ, ಇ.ಓ ಸುದೀಪ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಕ್ಕಣ್ಣವರ್, ಅಗ್ನಿ ಶಾಮಕ ಸಿಬ್ಬಂದಿಯವರು ತಾಲ್ಲೂಕಿನ ಬಗ್ಗೆ ತೀವ್ರ ಎಚ್ಚರ ವಹಿಸಿದ್ದಾರೆ.
ಮಳೆಯಿಂದ ತಾಲ್ಲೂಕಿನ ನಲ್ಲೂರುನಲ್ಲಿ ಭತ್ತದ ಗ್ದೆ ನೀರಿನಿಂದ ಆವೃತವಾಗಿದ್ದು, ರಾಷ್ಟ್ರೀಯ ಹೆದ್ದಾರಿ-169ರ ಕಾವಡಿಯ ಅಗ್ರಹಾರದ ಮತ್ತು ಕರುವಾನೆ ಸಮೀಪ ರಸ್ತೆಯಲ್ಲಿ ಧರೆ ಕುಸಿದಿದೆ. ಕಿರುಕೋಡು ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ಗಿಣಿಕಲು ಗ್ರಾಮದ ಶಾಂತ ಎಂಬುವವರ ಮನೆಯ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕೆರೆ ಗ್ರಾಮ ಪಂಚಾಯಿತಿಯ ಶಿಲುರ್ ಗ್ರಾಮದ ಗುರಿಗೆ ಹೋಗುವ ರಸ್ತೆಯಲ್ಲಿ ಮೋರಿ ಕುಸಿದು ರಸ್ತೆ ಜಖಂ ಆಗಿದೆ.
ವಿದ್ಯುತ್ ಕಂಬಗಳು ಧರೆಗೆ :
ತಾಲ್ಲೂಕಿನಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಉಳುವೆಯಲ್ಲಿ 2 ಕಂಬ, ಸಿರಿಮನೆಯಲ್ಲಿ 3 ಕಂಬ, ಕೋಗೋಡುನಲ್ಲಿ 1 ಕಂಬ, ನೆಮಾರ್‌ನಲ್ಲಿ 3 ಕಂಬ, ಬೆಟ್ಟಗೆರೆಯಲ್ಲಿ 4 ಕಂಬ, ಮೇಗಳಬೈಲಿನಲ್ಲಿ 2 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರಿಂದ ಈ ಭಾಗದ ಜನರು ರಾತ್ರಿಯಿಡಿ ಕತ್ತಲಲ್ಲಿ ಕಳೆಯುವಂತಾಗಿದ್ದು, ಮಲೆನಾಡಿಗರು ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಅನೇಕ ಆವಾಂತರಗಳನ್ನು ಸೃಷ್ಟಿಸಿದೆ.
ಭದ್ರಾನದಿ ಭರ್ತಿ :
ಭದ್ರಾನದಿ ತುಂಬಿ ಹರಿದಿದ್ದು, ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ನದಿ ನೀರಿನಲ್ಲಿ ಮುಳುಗಿದ್ದು, ಸಂಚಾರ ಕಡಿತಗೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಬ್ಯಾರಿಕೇಟ್ ಅಳವಡಿಸಿ ವಾಹನ ಸಂಚಾರ ನಿಷೇಧಿಸಲಾಗಿತ್ತು.
ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನದಿಪಾತ್ರದ ಪ್ರದೇಶಗಳಿಗೆ ಜನರು ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ. ಕುದುರೆಮುಖ, ಕಳಸ ಭಾಗದಲ್ಲಿ ಬಾರೀ ಮಳೆಯಾಗಿದ್ದು, ಭದ್ರಾನದಿ ತುಂಬಿ ಹರಿಯುತ್ತಿದೆ.
ಚಿಕ್ಕಮಗಳೂರಿನ ಮಲ್ಲಂದೂರು ಗ್ರಾಮದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಕಾರೊಂದು ರಸ್ತೆ ಬದಿಯ ಕುಲುಮೆ ಮೇಲೆ ಉರುಳಿ ಬಿದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಾವಳಿ ಗ್ರಾಮ ಪಂಚಾಯತ್ ಕೆಳಗೂರು ಸಮೀಪದ ಜೆ.ಹೊಸಳ್ಳಿ ಮಾಳಿಗಾನಾಡು ರಸ್ತೆ ಉದ್ದಕ್ಕೂ ಮರಗಳು ಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರ ತೆರವು ಗೊಳಿಸಿದರು.
ಸಂಪರ್ಕ ಕಡಿತ :
ಕಡವಂತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಸಾಪುರ ಗ್ರಾಮದ ಹತ್ತಿರ ರಸ್ತೆ ಮೇಲೆ ನೀರು ಹರಿದು ಶಿರವಾಸೆ-ಸಂಗಮೇಶ್ವರ ಪೇಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮುಳ್ಳಯ್ಯನಗಿರಿ ಭಾಗದಲ್ಲಿ ರಸ್ತೆ ಕುಸಿತ :
ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ಮಧ್ಯೆ ನಾಲ್ಕೈದು ಕಡೆ ರಸ್ತೆ ಬದಿಯಲ್ಲಿ ಕುಸಿತವಾಗಿದೆ. ಬಾಳೂರು ಗ್ರಾಮದ ಶೇಷಪ್ಪ ಎಂಬುವರ ಮನೆ ಮೇಲೆ ಮರ ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ವಸ್ತಾರೆ ಹೋ ಬಳಿ ಚಿತ್ತವಳ್ಳಿ ಗ್ರಾಮದ ಹೇಮಾವತಿ ಎಂಬುವರ ಮನೆಗೆ ಹಾನಿಯಾಗಿದೆ. ಬಾರಿ ಮಳೆ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಜನರು ಸ್ಥಳಾಂತರ ಆಗುವ ಆತಂಕ ಎದುರಾಗಿದ್ದು, ಮುಂಜಾಗ್ರತಾ ಕ್ರಮಕ್ಕಾಗಿ ಪೊಲೀಸರು, ಅಗ್ನಿಶಾಮಕದಳ, ಸ್ವಯಂ ಸೇವ ಕರು, ಎನ್‌ಡಿಆರ್‌ಎ್ ತಂಡ ಹಾಗೂ ಜಿಲ್ಲಾಡಳಿತ ಸಜ್ಜಾಗಿದೆ.