Friday, November 22, 2024
Homeರಾಷ್ಟ್ರೀಯ | Nationalಕೇದಾರನಾಥ ದೇವಾಲಯದ ಚಿನ್ನಾಭರಣ ಕಳವು ಕುರಿತು ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ

ಕೇದಾರನಾಥ ದೇವಾಲಯದ ಚಿನ್ನಾಭರಣ ಕಳವು ಕುರಿತು ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ

ಡೆಹ್ರಾಡೂನ್‌,ಜು.17- ಉತ್ತರಾಖಂಡದ ಹಿಂದೂಗಳ ಪವಿತ್ರ ಚಾರ್‌ಧಾಮ್‌ ಕ್ಷೇತ್ರಗಳಲ್ಲೊಂದಾದ ಕೇದಾರನಾಥ ದೇವಾಲಯದ ಚಿನ್ನ ಕಳುವಾಗಿದೆ ಎಂಬ ಆರೋಪದ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮೀಜಿ ಶ್ರೀಗಳ ಆರೋಪ ದುರದೃಷ್ಟಕರ ಎಂದು ಹೇಳಿದೆ.

ಕೇದಾರನಾಥ ದೇವಾಲಯದ 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ, ಯಾರು ಈ ಬಗ್ಗೆ ಮಾತನಾಡುತ್ತಿಲ್ಲ. ಈವರೆಗೆ ಯಾವುದೇ ತನಿಖೆಯೂ ಆಗಿಲ್ಲ. 228 ಕೆ.ಜಿ ಚಿನ್ನ ನಾಪತ್ತೆ, ಇದೊಂದು ದೊಡ್ದ ಹಗರಣ, ಇದಕ್ಕೆ ಯಾರು ಜವಾಬ್ದಾರಿ? ಕೇದಾರನಾಥ ದೇವಾಲಯದ ಗರ್ಭಗುಡಿಯೊಳಗಿನ ಸುಮಾರು 200 ಕಿಲೋಗ್ರಾಂಗಳಷ್ಟು ಚಿನ್ನದ ಲೇಪನ ನಾಪತ್ತೆಯಾಗಿದೆ.ಗೋಡೆಯ ಒಂದು ಭಾಗವು ಮಸಿಯಿಂದ ಸುಟ್ಟು ಹೋಗಿದೆ. ಇದೊಂದು ಬಹುದೊಡ್ಡ ಚಿನ್ನದ ಹಗರಣ, ಈಗ ದೆಹಲಿಯಲ್ಲಿ ಕೇದಾರನಾಥ ದೇಗುಲ ನಿರ್ಮಿಸಲು ಹೊರಟಿದ್ದಾರೆ ಎಂದು ಶಂಕರಾಚಾರ್ಯ ಪೀಠದ ಸ್ವಾಮೀಜಿಗಳು ಆರೋಪಿಸಿದ್ದರು.

ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇದಾರನಾಥ – ಬದರೀನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್‌, ಅವಿಮುಕ್ತೇಶ್ವರಾನಂದ ಸ್ವಾಮೀಜಿಗಳ ಆರೋಪ ಬಹಳ ಬೇಸರ ತಂದಿದೆ. ಸ್ವಾಮೀಜಿಗಳು ನಿಜಾಂಶವನ್ನು ಭಕ್ತರ ಮುಂದೆ ಇಡಲಿ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಶ್ರೀಗಳಿಗೆ ನಾನು ಸವಾಲನ್ನು ಹಾಕುತ್ತಿದ್ದೇನೆ, ಅವರು ಮಾಡಿರುವ ಆರೋಪವನ್ನು ರುಜುವಾತು ಪಡಿಸಲಿ. ಸಾರ್ವಜನಿಕವಾಗಿ ಆಧಾರ ರಹಿತ ಹೇಳಿಕೆ ನೀಡುವ ಮೊದಲು, ಸಂಬಂಧಪಟ್ಟ ಸಮಿತಿಯ ಮುಂದೆ ಚಿನ್ನ ನಾಪತ್ತೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ಒತ್ತಾಯಿಸಬಹುದಾಗಿತ್ತು ಎಂದು ಹೇಳಿದ್ದಾರೆ.

ಒಂದು ವೇಳೆ ಕೇದಾರನಾಥ ದೇವಾಲಯದ 228 ಕೆಜಿ ಚಿನ್ನ ನಾಪತ್ತೆಯಾಗಿರುವುದು ನಿಜವಾಗಿದ್ದಲ್ಲಿ, ಸಾಕ್ಷ್ಯಾಧಾರ ಸಹಿತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿತ್ತು. ಯಾವುದೇ ಆಧಾರವಿಲ್ಲದೇದೇವಾಲಯದ ಬಗ್ಗೆ ಅಪಪ್ರಚಾರ ಮಾಡುವ ಹಕ್ಕು ಸ್ವಾಮೀಜಿಗಳಿಗೆ ಇಲ್ಲ ಎಂದಿದ್ದಾರೆ.

ಸ್ವಾಮೀಜಿಗಳಿಗೆ ಯಾವುದೇ ಸ್ಪಷ್ಟತೆ ಇದ್ದಂತಿಲ್ಲ, ವಿನಾಕಾರಣ ಆರೋಪ ಮಾಡಿ ಗೊಂದಲ ಸೃಷ್ಟಿಸುವುದು ಅವರ ಕೆಲಸ. ಕಾಂಗ್ರೆಸ್‌‍ ಪಕ್ಷದ ಅಜೆಂಡಾದಂತೆ ಅವರು ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದ ಗರ್ವಾಲ್‌ ಹಿಮಾಲಯ ಶ್ರೇಣಿಯಲ್ಲಿರುವ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ್‌ ಕೂಡಾ ಒಂದು. ಚಾರ್‌ಧಾಮ್‌ ಕ್ಷೇತ್ರಗಳಲ್ಲೊಂದಾದ ಕೇದಾರನಾಥದಲ್ಲಿ ಚಿನ್ನ ಕಳುವಾಗಿರುವ ಆರೋಪ ಭಾರೀ ಸಂಚಲನವನ್ನು ಮೂಡಿಸಿದೆ.

RELATED ARTICLES

Latest News