ಬೆಂಗಳೂರು,ಜ.5- ಹೊಸ ವರ್ಷ- 2026ರ ಆರಂಭದಲ್ಲೇ ಸರ್ಕಾರ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಹೊಸ ವರ್ಷವು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ದೊಡ್ಡ ಬದಲಾವಣೆಯನ್ನು ತರುವ ನಿರೀಕ್ಷೆಯಿದೆ. ಮೊದಲ ವರ್ಷದಲ್ಲಿ ವಿವಿಧ ಇಲಾಖೆ ಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ್ದ ಆಡಳಿತ ಈಗ ಮಹತ್ವದ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. ಸರ್ಕಾರ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದ್ದೇ ಆದಲ್ಲಿ, ಹೊಸ ವರ್ಷದ ಆರಂಭದಲ್ಲಿ 24,300 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಮುಖ್ಯಮಂತ್ರಿಯವರು ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಆಂತರಿಕ ಮೀಸಲಾತಿಯ ಅನುಷ್ಠಾನದಿಂದ ಉಂಟಾದ ವಿಳಂಬದಿಂದಾಗಿ ಪ್ರಕ್ರಿಯೆ ನಿಧಾನವಾಗಿತ್ತು. ಆದರೆ, ಈಗ ಹಂತ ಹಂತವಾಗಿ ನೇಮಕಾತಿ ಹಾದಿಗೆ ಮರಳಿದೆ ಎಂದು ಹೇಳಿದ್ದರು. ಹಣಕಾಸು ಇಲಾಖೆಯು ಈಗಾಗಲೇ ಮೊದಲ ಹಂತದಲ್ಲಿ 24,300 ಹುದ್ದೆಗಳಿಗೆ ಅನುಮೋದನೆ ನೀಡಿದೆ. ಇದರ ಜೊತೆಗೆ, ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ 32,132 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಯಾವ ಯಾವ ಹುದ್ದೆಗಳು ಭರ್ತಿ :
ಕರ್ನಾಟಕದಲ್ಲಿ ಒಟ್ಟು 2,84,881 ಖಾಲಿ ಹುದ್ದೆಗಳಿವೆ. ಇವುಗಳಲ್ಲಿ 96,844 ಹುದ್ದೆಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗಿದೆ. ಉಳಿದ 1,88,037 ಹುದ್ದೆಗಳಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕಾರ್ಯೋನುಖವಾಗಿದೆ.
ಕಳೆದ ಮೂರು ವರ್ಷಗಳಲ್ಲಿ, 562 ಗ್ರೂಪ್ ಎ, 619 ಗ್ರೂಪ್ ಬಿ ಮತ್ತು 23,119 ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಲಾಗಿದೆ. ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ 8,157 ನೇಮಕಾತಿಗಳು ಪೂರ್ಣಗೊಂಡಿವೆ ಮತ್ತು 3,081 ಪ್ರಗತಿಯಲ್ಲಿವೆ.
ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಹುದ್ದೆಗಳು ಖಾಲಿ :
ಅತಿ ಹೆಚ್ಚು ಖಾಲಿ ಹುದ್ದೆಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿವೆ. ಅವುಗಳ ಸಂಖ್ಯೆ 79,694. ನಂತರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ 37,572, ನಗರಾಭಿವೃದ್ಧಿಯಲ್ಲಿ 28,188, ಉನ್ನತ ಶಿಕ್ಷಣದಲ್ಲಿ 13,599, ಕಂದಾಯ ಇಲಾಖೆಯಲ್ಲಿ 10,867, ಪಶುಸಂಗೋಪನೆಯಲ್ಲಿ 11,020, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಲ್ಲಿ 10,504, ಪರಿಶಿಷ್ಟ ಜಾತಿಗಳ ಕಲ್ಯಾಣದಲ್ಲಿ 9,646 ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದಲ್ಲಿ 8,525 ಹುದ್ದೆಗಳು ಖಾಲಿ ಇವೆ.
ವೈದ್ಯರ ನೇಮಕಾತಿಗೆ ಹೆಚ್ಚಿನ ಆದ್ಯತೆ :
2026ರ ಆರಂಭಿಕ ತಿಂಗಳುಗಳಲ್ಲಿ ಆರೋಗ್ಯ ಸೇವೆಗಳ ಮೇಲೆ ಹೆಚ್ಚಿನ ಗಮನ ನೀಡಲಾಗುವುದು. 3,000 ವೈದ್ಯರ ಹುದ್ದೆಗಳಲ್ಲಿ, 1,500 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು. 800 ವೈದ್ಯರ ನೇಮಕಾತಿ ಪೂರ್ಣಗೊಂಡಿದ್ದು, ಅವರಿಗೆ ಕೌನ್ಸಲಿಂಗ್ ಮೂಲಕ ಸ್ಥಳಾವಕಾಶಗಳನ್ನು ನೀಡಲಾಗುವುದು.
ತಕ್ಷಣದ ಅಗತ್ಯಗಳನ್ನು ಪೂರೈಸಲು ಸರ್ಕಾರವು 337 ತಜ್ಞ ವೈದ್ಯರು ಮತ್ತು 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿದೆ. ಒಂದು ವೇಳೆ ನೇಮಕ ಪ್ರಕ್ರಿಯೆಗಳು ಅಂದುಕೊಂಡಂತೆ ನಡೆದರೆ, ಕರ್ನಾಟಕವು 2026 ಅನ್ನು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸಕ್ರಿಯ ನೇಮಕಾತಿ ಅಭಿಯಾನದೊಂದಿಗೆ ಪ್ರಾರಂಭಿಸಬಹುದು, ಇದು ಪ್ರಮುಖ ಸಾರ್ವಜನಿಕ ಸೇವಾ ವಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಲು ಕಾಲಮಿತಿಯನ್ನು ನಿಗದಿ ಪಡಿಸುತ್ತದೆ.
