Friday, November 22, 2024
Homeರಾಜ್ಯವಿಧಾನಸಭೆಯಲ್ಲಿ ಮುಂದುವರೆದ ಹಗರಣಗಳ ಗದ್ದಲ, ಪ್ರತಿಪಕ್ಷಗಳ ಧರಣಿ, ಕಲಾಪ ಮುಂದೂಡಿಕೆ

ವಿಧಾನಸಭೆಯಲ್ಲಿ ಮುಂದುವರೆದ ಹಗರಣಗಳ ಗದ್ದಲ, ಪ್ರತಿಪಕ್ಷಗಳ ಧರಣಿ, ಕಲಾಪ ಮುಂದೂಡಿಕೆ

ಬೆಂಗಳೂರು, ಜು.19- ವಾಲ್ಮೀಕಿ ಅಭಿವದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಂಜಸ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳು ನಿನ್ನೆ ಆರಂಭಿಸಿದ ಧರಣಿಯನ್ನು ವಿಧಾನಸಭೆಯಲ್ಲಿ ಇಂದು ಮುಂದುವರೆಸಿದ್ದರಿಂದ ಆರೋಪ, ಪ್ರತ್ಯಾರೋಪ ನಡೆದು ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಬೇಕಾಯಿತು.

ಇಂದು ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌‍ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ಮುಂದುವರೆಸಿದರು.ಈ ಸಂದರ್ಭದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಮಾತನಾಡಿ, ಧರಣಿ ಕೈ ಬಿಟ್ಟು ಸ್ವಸ್ಥಾನಗಳಿಗೆ ತೆರಳಿ ಕಲಾಪ ಸುಗಮವಾಗಿ ನಡೆಯಲು ಸಹಕರಿಸಿ ಎಂದು ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕ ರ್ಆ.ಅಶೋಕ್‌ ಹಾಗೂ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ಎದ್ದು ನಿಂತು ಮಾತನಾಡಲು ಮುಂದಾದರು. ಅಷ್ಟರಲ್ಲಿ ಕಾಂಗ್ರೆಸ್‌‍ನ ಹಲವು ಶಾಸಕರು ಎದ್ದು ನಿಂತು ಪ್ರತಿಯಾಗಿ ಮಾತನಾಡಲು ಮುಂದಾದರು. ಆಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಸುರೇಶ್‌ ಬಾಬು ಮಾತನಾಡಿ ಮುಖ್ಯಮಂತ್ರಿಯವರ ಉತ್ತರ ಸಮರ್ಪಕವಾಗಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.

ಆರ್‌.ಅಶೋಕ್‌ ಮಾತನಾಡಿ, ಮುಖ್ಯಮಂತ್ರಿಯವರು ಆಡಳಿತ ಪಕ್ಷದ ಶಾಸಕರಿಗೆ ತಮನ್ನು ಸಮರ್ಥಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದಕ್ಕಾಗಿ ಇಂದು ಕಲಾಪದಲ್ಲಿ ಕಾಂಗ್ರೆಸ್‌‍ ಶಾಸಕರು ಗಲಾಟೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಪ್ರತಿಪಕ್ಷದವರು ಧರಣಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಏಕೆ ಎದ್ದು ನಿಲ್ಲುತ್ತಿದ್ದೀರಿ. ನಿಮ ಸ್ಥಾನದಲ್ಲೇ ಕುಳಿತುಕೊಳ್ಳಿ. ಪ್ರತಿಪಕ್ಷದವರ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಅಸಹನೆ ವ್ಯಕ್ತ ಪಡಿಸಿದರು.

ಎಲ್ಲರೂ ಒಟ್ಟಿಗೆ ಮಾತನಾಡಿದರೆ ಏನು ಕೇಳುವುದಿಲ್ಲ. ಒಬ್ಬೊಬ್ಬರಾಗಿ ಮಾತನಾಡಿದರೆ ಸರಿಯಾಗಿ ಕೇಳುತ್ತದೆ ಎಂದರು. ಆಗ ಆರ್‌.ಅಶೋಕ್‌ ಮತ್ತೆ ಮಾತನಾಡಿ, ವಾಲೀಕಿ ನಿಗಮದಲ್ಲಿ ಹಗರಣವಾಗಿದೆ. ಹಣ ಲೂಟಿಯಾಗಿದೆ ಎಂದು ಆಡಳಿತ ಪಕ್ಷದವರು ನಮನ್ನು ಬೆಂಬಲಿಸುತ್ತಿದ್ದಾರೆ. ಘೋಷಣೆ ಕೂಗುತ್ತಿದ್ದಾರೆ. ಅಲ್ಲದೆ, ಅನುದಾನಕ್ಕಾಗಿ ತಮದೇ ಸರ್ಕಾರದ ಮುಖ್ಯಸ್ಥರ ವಿರುದ್ಧ ಪರೋಕ್ಷವಾಗಿ ಗಲಾಟೆ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.

ಧರಣಿ ನಿರತ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲ ಉಂಟು ಮಾಡಿದರೆ, ಆಡಳಿತ ಪಕ್ಷದ ಶಾಸಕರು ತಮ ಸ್ಥಾನಗಳಲ್ಲೇ ಎದ್ದು ನಿಂತು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದರು. ಇದರಿಂದ ಸದನ ಗದ್ದಲದಿಂದ ಗೊಂದಲದ ಗೂಡಾಯಿತು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ.ಆಗ ಸಭಾಧ್ಯಕ್ಷರು ಪದೇ ಪದೇ ಮಾಡಿದ ಮನವಿಗೆ ಯಾರು ಕಿವಿಗೊಡದಿದ್ದಾಗ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

RELATED ARTICLES

Latest News