ಬೆಂಗಳೂರು,ಜು.20- ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಎಲ್ಲಾ ಮಕ್ಕಳಿಗೂ ಮುಂದಿನ ಮೂರು ವರ್ಷಗಳವರೆಗೆ ವಾರದ ನಾಲ್ಕು ದಿನಗಳ ಕಾಲ ಉಚಿತ ಮೊಟ್ಟೆ ನೀಡಲು ಅಜೀಂಪ್ರೇಮ್‍ಜಿ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರ ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಉದ್ದೇಶದಿಂದ ಆರಂಭದಲ್ಲಿ ಒಂದು ದಿನ ಅನಂತರ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ದಿನ ಉಚಿತವಾಗಿ ಮೊಟ್ಟೆ ನೀಡಲಾಗುತ್ತಿತ್ತು.
ಅಜೀಂಪ್ರೇಮ್‍ಜಿ ಯವರು ದೊಡ್ಡ ಮನಸ್ಸು ಮಾಡಿ 1,500 ಕೋಟಿ ರೂ. ವೆಚ್ಚದಲ್ಲಿ ಉಳಿದ ನಾಲ್ಕು ದಿನಗಳ ಕಾಲವೂ ಮಕ್ಕಳಿಗೆ ಉಚಿತವಾಗಿ ಮೊಟ್ಟೆ ನೀಡಲು ಮುಂದೆ ಬಂದಿದ್ದಾರೆ. ಇದರಿಂದ ರಾಜ್ಯದ 55 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಜೀಂಪ್ರೇಮ್‍ಜಿ ಕುಟುಂಬ ಅನೇಕ ದಾನಧರ್ಮಗಳನ್ನು ಮಾಡಿದೆ. ಅವರ ದೊಡ್ಡತನದಿಂದಾಗಿ ಮಕ್ಕಳಿಗೆ ಪುಷ್ಕಳ ಆಹಾರ ದೊರೆಯುವಂತಾಗಿದೆ ಎಂದರು. ಮಕ್ಕಳು ಆರೋಗ್ಯವಂತರಾಗಿರಬೇಕು. ದೈಹಿಕ ಸದೃಢತೆ ಇದ್ದಾಗ ಜ್ಞಾನವಿಕಾಸವಾಗುತ್ತದೆ. ಬಡವರು, ಶ್ರೀಮಂತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಸಮಾನ ಶಿಕ್ಷಣ ಸಿಗುವಂತಾಗಬೇಕು.
ಈ ನಿಟ್ಟಿನಲ್ಲಿ ಈ ಹಿಂದೆ ತಮ್ಮ ಮೊದಲಾವ„ಯ ಸರ್ಕಾರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್‍ಗಳನ್ನ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಶ್ರೀಮಂತರ ಮಕ್ಕಳು ಸಮವಸ, ಶೂ, ಸಾಕ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಬಡವರ ಮಕ್ಕಳಲ್ಲಿ ಬೇಧಭಾವ ಸೃಷ್ಟಿಸಬಾರದು, ಜಾತಿಯ ಸೋಂಕು ಇರಬಾರದು, ಜಾತ್ಯಾತೀತರಾಗಿ ಬೆಳೆಯುವಂತ ವಾತಾವರಣ ನಿರ್ಮಾಣವಾಗಬೇಕು ಎಂದು ರಾಜ್ಯಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಉಪಹಾರ, ಊಟ ಇಲ್ಲದೇ ಎಷ್ಟೋ ಮಕ್ಕಳು ಶಾಲೆಗೆ ಬರುವ ಪರಿಸ್ಥಿತಿ ಇತ್ತು. ಅದಕ್ಕಾಗಿ ಹಾಲು, ಮಧ್ಯಾಹ್ನದ ಬಿಸಿಯೂಟ ಜಾರಿಗೆ ತರಲಾಯಿತು. ಮೊಟ್ಟೆ ನೀಡುವ ಕಾರ್ಯಕ್ರಮವೂ ಕೂಡ ಹಂತಹಂತವಾಗಿ ಜಾರಿಗೆ ಬಂದಿತು ಎಂದು ವಿವರಿಸಿದರು.
ಹುಟ್ಟುವಾಗ ವಿಶ್ವಮಾನವರು, ಬೆಳದಂತೆ ಅಲ್ಪಮಾನವರಾಗುತ್ತಾರೆ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಸಮಾಜದಲ್ಲಿ ವಿಶ್ವಮಾನವರಾಗಬೇಕು. ಅಲ್ಪಮಾನವರಾಗಬಾರದು. ಜಾತ್ಯಾತೀತ ಸಮಸಮಾಜದ ನಿರ್ಮಾಣವಾಗಬೇಕಾದರೆ ಎಲ್ಲರೂ ಜಾತ್ಯತೀತರಾಗಬೇಕು. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಜ್ಞಾನವಿಕಾಸ ಹೊಂದಬೇಕು, ವೈಜ್ಞಾನಿಕ, ವೈಚಾರಿಕ ವಿಕಾಸಗೊಳ್ಳಬೇಕು. ಆಗ ಮಾತ್ರ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉದ್ಯಮಿ ಅಜೀಂಪ್ರೇಮ್‍ಜಿ, ಶ್ರೀಮತಿ ಯಾಸ್ಮಿನ್, ಶಾಲಾ ಶಿಕ್ಷಣ ಸಾಕ್ಷರತಾ ಸಚಿವ ಮಧುಬಂಗಾರಪ್ಪ, ಶಾಸಕ ರಿಜ್ವಾನ್ ಹರ್ಷದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.