Tuesday, September 17, 2024
Homeರಾಜ್ಯಎಡಬಿಡದೆ ಸುರಿಯುತ್ತಿರುವ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಎಡಬಿಡದೆ ಸುರಿಯುತ್ತಿರುವ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಚಿಕ್ಕಮಗಳೂರು/ಕೊಡಗು/ಶಿವಮೊಗ್ಗ, ಜು.20- ಮಲೆನಾಡು, ಕರಾವಳಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರೆದಿದ್ದು, ಹಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮುದ್ವತಿ, ತುಂಗಾ, ಹಾರಂಗಿ, ಕಾವೇರಿ, ಕಪಿಲಾ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ನದಿಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಧಾರಕಾರ ಮಳೆಗೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಹೊಲ-ಗದ್ದೆಗಳು ಜಲಾವೃತಗೊಂಡಿವೆ. ಮತ್ತೆ ಕೆಲವೆಡೆ ಮನೆಗಳು ಕುಸಿದು ಸಾವು-ನೋವುಗಳು ಸಂಭವಿಸಿವೆ. ಕರಾವಳಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಶಿರಾಡಿಘಾಟ್‍ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಸಕಲೇಶಪುರ ದೊಡ್ಡತೋಪು ಬಳಿ ರಸ್ತೆಗೆ ಮಣ್ಣು ಕುಸಿದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಚಾರಕ್ಕೆ ಅಡಚಣೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಗುಡ್ಡ ಕುಸಿದು ಶೃಂಗೇರಿ ತಾಲ್ಲೂಕು ನೆಮ್ಮಾರಮಕ್ಕಿ ಬಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಸವಾರರು ಪರದಾಡುವಂತಾಯಿತು.

ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಸಂಚಾರ ನಿರ್ಬಂvಸಲಾಗಿದೆ. ರಸ್ತೆ ಬಂದ್ ಮಾಡಲಾಗಿದೆ. ಧಾರ್ಮಿಕ ಕ್ಷೇತ್ರ ನಂಜುಂಡೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಬಳಿ ಕುಸಿದಿದ್ದ ಗುಡ್ಡ ತೆರವು ಕಾರ್ಯಚರಣೆ ಮುಂದುವರೆದಿದೆ. ಮಣ್ಣಿನಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಐದು ದಿನಗಳಿಂದ NDRF ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಹತ್ತು ಮಂದಿ ಮಣ್ಣಿನಡಿ ಸಿಲುಕಿದ್ದು, ಏಳು ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದೆ.

ಮಲೆನಾಡು, ಕರಾವಳಿ, ಪಶ್ಚಿಮಘಟ್ಟ, ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಗೆ ನದಿಗಳ ಆರ್ಭಟ ಜೋರಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಾಸನ ಜಿಲ್ಲೆಯಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಮನೆಗಳು ಕುಸಿತಗೊಂಡು ಜನ ಹೈರಾಣಾಗಿದ್ದಾರೆ. ವಿದ್ಯುತ್ ಸಂಪರ್ಕ ಕಡಿತದಿಂದ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಸತತ ಮಳೆಯಿಂದ ಹೇಮಾವತಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿದೆ. ಬೇಲೂರು ಸಮೀಪದ ಯಗಚಿ ಜಲಾಶಯವು ಬಹುಪಾಲು ಭರ್ತಿಯಾಗಿದೆ.

ಬೆಳಗಾವಿ ಜಿಲ್ಲೆ ಖಾನಾಪುರ, ಮಹಾರಾಷ್ಟ್ರದ ಸಾವಂತವಾಡಿ ತಾಲ್ಲೂಕಿನ ಹಲವು ಸೇತುವೆಗಳು ಭಾರೀ ಮಳೆಗೆ ಮುಳುಗಡೆಯಾಗಿವೆ. ಕಾಡಂಚಿನ 30ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ 24 ಮನೆಗಳು ಸಂಪೂರ್ಣ ಕುಸಿದು ಹೋಗಿದ್ದು, 74 ಮನೆಗಳು ಭಾಗಶಃ ಕುಸಿದಿವೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಅಘನಾಶಿನಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಚಾರ್ಮುಡಿ ರಸ್ತೆಯಲ್ಲಿ ಭೂಕುಸಿತ ಸಾಧ್ಯತೆ ಇರುವ ಕಾರಣ ರಸ್ತೆಯನ್ನು ಮುಚ್ಚಲಾಗಿದೆ.

ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, 86 ಗ್ರಾಮಗಳ ನಿವಾಸಿಗಳನ್ನು ಆರೋಗ್ಯಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಶಿವಮೊಗ್ಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

RELATED ARTICLES

Latest News