Sunday, November 24, 2024
Homeರಾಜ್ಯರಾಜ್ಯದಲ್ಲಿ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆ: ಮೂರು ದಿನ ಆರೆಂಜ್ ಅಲರ್ಟ್

ರಾಜ್ಯದಲ್ಲಿ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆ: ಮೂರು ದಿನ ಆರೆಂಜ್ ಅಲರ್ಟ್

ಬೆಂಗಳೂರು, ಜು.20-ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ಜುಲೈ ಒಂದರಿಂದ ಇದುವರೆಗೆ ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಹವಾಮಾನ ಮುನ್ಸೂನೆಗಳಿವೆ. ಕರಾವಳಿ ಜಿಲ್ಲೆಗಳಿಗೆ ಇಂದೂ ಕೂಡ ರೆಡ್ ಅಲರ್ಟ್ ನೀಡಲಾಗಿದ್ದು, ನಾಳೆಯಿಂದ ಮೂರು ದಿನಗಳ ಆರೆಂಜ್ ಅಲರ್ಟ್‍ನ್ನು ಹವಾಮಾನ ಇಲಾಖೆ ನೀಡಿದೆ.

ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮಲೆನಾಡು ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯಲಿದ್ದು, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನಲ್ಲಿ ಎಂದಿನಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಜುಲೈ ಒಂದರಿಂದ ಇಂದಿನವರೆಗೆ ರಾಜ್ಯದಲ್ಲಿ 174 ಮಿ.ಮೀ.ನಷ್ಟು ವಾಡಿಕೆ ಮಳೆ ಪ್ರಮಾಣವಿದ್ದು, 262 ಮಿ.ಮೀ.ನಷ್ಟು ಮಳೆಯಾಗಿದೆ. ಜೂನ್ ಒಂದರಿಂದ ಇದುವರೆಗೆ ರಾಜ್ಯದಲ್ಲಿ 373 ಮಿ.ಮೀ.ವಾಡಿಕೆ ಮಳೆ ಪ್ರಮಾಣವಿದ್ದು, 464 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ. 24ರಷ್ಟು ಅ„ಕ ಮಳೆಯಾಗಿದೆ.

ರಾಜ್ಯದಲ್ಲಿ ಜುಲೈ ಒಂದರಿಂದ ಇದುವರೆಗೆ ದಕ್ಷಿಣ ಒಳನಾಡಿನಲ್ಲಿ ಶೇ.43, ಉತ್ತರ ಒಳನಾಡಿನಲ್ಲಿ ಶೇ.20, ಮಲೆನಾಡಿನಲ್ಲಿ ಶೇ.52 ಹಾಗೂ ಕರಾವಳಿಯಲ್ಲಿ ಶೇ.65ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಜುಲೈ 27ರವರೆಗೆ ರಾಜ್ಯದಲ್ಲಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಅ„ಕ ಮಳೆ ಮುಂದುವರೆಯಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಆಗಾಗ್ಗೆ ತಂಪಾದ ಮೇಲ್ಮೈಗಾಳಿ ಬೀಸುವುದರಿಂದ ಚಳಿಯ ಅನುಭವವಾಗಲಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.

ಭರ್ತಿಯತ್ತ ಜಲಾಶಯಗಳು: ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳ ಹರಿವು ಸಾಕಷ್ಟು ಪ್ರಮಾಣದಲ್ಲಿದ್ದು, ಆಲಮಟ್ಟಿ, ನಾರಾಯಣಪುರ, ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ಭರ್ತಿಯಾಗುವ ಮಟ್ಟಕ್ಕೆ ನೀರು ಸಂಗ್ರಹವಾಗಿದೆ. ಆದರೆ, ಒಳ ಹರಿವು ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೊರ ಹರಿವನ್ನೂ ಹೆಚ್ಚಿಸಲಾಗಿದೆ.

ಒಂದೇ ದಿನದಲ್ಲಿ ರಾಜ್ಯದ 14 ಜಲಾಶಯಗಳಿಗೆ 43.4 ಟಿಎಂಸಿ ಅಡಿಯಷ್ಟು ನೀರು ಬಂದಿದೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ 10.8, ಕೃಷ್ಣಾ ಕೊಳ್ಳದ ಜಲಾಶಯಗಳಿಗೆ 22.4 ಹಾಗೂ ಜಲ ವಿದ್ಯುತ್ ಉತ್ಪಾದಿಸುವ ಜಲಾಶಯಗಳಿಗೆ 102 ಟಿಎಂಸಿ ಅಡಿಯಷ್ಟು ನೀರು ಬಂದಿದೆ. ಲಿಂಗನಮಕ್ಕಿ, ಸೂಪ ಹಾಗೂ ವಾರಾಹಿ ಜಲಾಶಯಗಳಲ್ಲಿ ಶೇ.49ರಷ್ಟು ನೀರು ಸಂಗ್ರಹವಾಗಿದ್ದು, ಒಟ್ಟು 1,18,413 ಕ್ಯುಸೆಕ್ಸ್ ಒಳಹರಿವು ಇದೆ. ಜಲಾಶಯದಿಂದ ನೀರು ಬಿಡಲಾಗುತ್ತಿಲ್ಲ.

ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಶೇ.88ರಷ್ಟು ನೀರು ಸಂಗ್ರಹವಾಗಿದೆ. 1.25 ಲಕ್ಷ ಕ್ಯುಸೆಕ್ಸ್‍ನಷ್ಟು ಒಳಹರಿವು ಇದ್ದು, 45 ಸಾವಿರ ಕ್ಯುಸೆಕ್ಸ್‍ಗೂ ಹೆಚ್ಚು ಹೊರ ಹರಿವಿದೆ. ಕೃಷ್ಣಾ ಕೊಳ್ಳದ ಜಲಾಶಯಗಳಲ್ಲಿ ಒಟ್ಟಾರೆ ಶೇ.68ರಷ್ಟು ನೀರು ಸಂಗ್ರಹವಾಗಿದೆ. 2.58 ಲಕ್ಷ ಕ್ಯುಸೆಕ್ಸ್‍ಗೂ ಅ„ಕ ಪ್ರಮಾಣದ ಒಳ ಹರಿವಿದೆ. 73 ಸಾವಿರ ಕ್ಯುಸೆಕ್ಸ್‍ಗೂ ಹೆಚ್ಚು ನೀರನ್ನು ಜಲಾಶಯಗಳಿಂದ ಹೊರ ಬಿಡಲಾಗುತ್ತಿದೆ.

ಹೆಚ್ಚು ಕಡಿಮೆ ಸಾಕಷ್ಟು ಪ್ರಮಾಣದಲ್ಲಿ ಒಳಹರಿವು ಮುಂದುವರೆಯುವ ಸಾಧ್ಯತೆ ಇದೆ. ಮಳೆ ಕೂಡ ಮುಂದುವರೆಯುವ ಮುನ್ಸೂಚನೆ ಇರುವುದರಿಂದ ಈ ತಿಂಗಳ ಅಂತ್ಯದೊಳಗೆ ಜಲ ವಿದ್ಯುತ್ ಉತ್ಪಾದಿಸುವ ಜಲಾಶಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ.

RELATED ARTICLES

Latest News