ಬೆಂಗಳೂರು, ಜು.21-ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದರೆ ಕಾಂಗ್ರೆಸ್‍ನವರಿಗೆ ಕೈಕಾಲು ನಡುಗುತ್ತೆ ಎಂದು ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲು ಗ್ರಾಮದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸುವುದಿಲ್ಲ ಎಂದರೆ, ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕರ್ನಾಟಕಕ್ಕೆ ಬರಲೇ ಬಾರದು ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ತೊಂದರೆ ಉಂಟಾದ ಕಡೆ ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ. ಆದರೆ, ಮಂಡ್ಯಕ್ಕೆ ಹೋದರೂ ಬೇಡ ಎನ್ನುತ್ತಾರೆ. ಉತ್ತರ ಕರ್ನಾಟಕಕ್ಕೆ ಹೋಗುತ್ತೇನೆ ಎಂದರೆ ಅಲ್ಲಿಗೂ ಬೇಡ ಅಂತಾರೆ. ಸದ್ಯ ಹಾಸನಕ್ಕೆ ಬರಬೇಡಿ ಎನ್ನಲಿಲ್ಲ ಎಂದು ಮೂದಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಗುಡ್ಡ ಕುಸಿತ ಸ್ಥಳಕ್ಕೆ ನಿನ್ನೆ ಹೋದಾಗ 5 ಕಿ.ಮೀ.ದೂರದಲ್ಲೇ ತಡೆಗೋಡೆ ಇಟ್ಟು ಏನೂ ಚಿತ್ರೀಕರಣ ಮಾಡದಂತೆ ಆದೇಶ ಮಾಡಿದ್ದರು. ಆದರೆ, ಸಕಲೇಶಪುರದಲ್ಲಿ ಜಿಲ್ಲಾಡಳಿತ ಸೂಕ್ಷ್ಮವಾಗಿ ನೋಡಲು ಸ್ಪಲ್ಪ ಸಹಕಾರ ಕೊಟ್ಟಿದ್ದಾರೆ ಎಂದಿದ್ದಾರೆ.
ದರೋಡೆ ನಿಲ್ಲಿಸಲು ಮಿಲಿಟರಿ: ನಾನು ಯಾರನ್ನೂ ಟೀಕೆ ಮಾಡುವುದಿಲ್ಲ. ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಮಿಲಿಟರಿ ತರಬೇಕೆಂದು. ಮಿಲಿಟರಿ ತರಲು ಏಕೆ ಹೇಳಿದ್ದಾರೆ ಎಂಬುದರ ಯೋಚನೆ ಮಾಡುತ್ತಿದ್ದೇನೆ. ಅವರು ಮಿಲಿಟರಿ ಏಕೆ ತರಲು ಹೇಳಿದ್ದಾರೆಂದರೆ, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಿಂತಲೂ ಚೆನ್ನಾಗಿ ದರೋಡೆ ನಡೆಯುತ್ತಿದೆ. ದರೋಡೆ ನಿಲ್ಲಿಸಲು ಮಿಲಿಟರಿ ಕರೆ ತರಲು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು, ಮಳೆ ಹಾನಿಗೆ ಸಂಬಂ„ಸಿದಂತೆ ಯಾವ ಸರ್ಕಾರವೂ ಹತ್ತು ಲಕ್ಷ ರೂ. ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಸಮಯ ಸಿಕ್ಕರೆ ಕೊಡಗಿಗೆ ಭೇಟಿ ನೀಡಲಿ. ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ತು ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿದ್ದೇವೆ. ಒಂದು ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. 50 ಸಾವಿರ ರೂ.ಗಳನ್ನು ಪದಾರ್ಥ ಕೊಳ್ಳಲು ಕೊಟ್ಟಿದ್ದೇವೆ. ಗೊತ್ತಿಲ್ಲದಿದ್ದರೆ ಹೋಗಿ ನೋಡಿಕೊಂಡು ಬರಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.