ನವದೆಹಲಿ,ಜು.21- ತೆರೆ ಕಂಡ ದಿನದಿಂದ ಭಾರಿ ಸದ್ದು ಮಾಡುತ್ತಿರುವ ಕಲ್ಕಿ 2898 ಎಡಿ ಸಿನಿಮಾದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ದೂರು ದಾಖಲಾಗಿದೆ. ಶ್ರೀ ಕಲ್ಕಿ ಧಾಮದ ಕಲ್ಕಿ ಆಚಾರ್ಯ ಪ್ರಮೋದ್ ಕೃಷ್ಣ ಎಂಬುವರು ಕಲ್ಕಿ 2898 ಎಡಿ ಸಿನಿಮಾದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಿನಿಮಾದ ನಟರಾದ ಪ್ರಭಾಸ್, ಅಮಿತಾಬ್ ಬಚ್ಚನ್ ಇನ್ನೂ ಕೆಲವರಿಗೆ ನೊಟೀಸ್ ನೀಡಿದ್ದಾರೆ.
ಸಿನಿಮಾವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎನ್ನಲಾಗಿದ್ದು, ಹಿಂದೂ ಸಂಸ್ಕøತಿಯ ದೇವರುಗಳ ಬಗೆಗೆ ಇರುವ ಕತೆಗಳನ್ನು, ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಕತೆಗಳನ್ನು ತಿರುಚಲಾಗಿದೆ ಹಾಗೂ ದೇವರುಗಳನ್ನು ಸಹಜವಲ್ಲದ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಚಿತ್ರವು ಭಗವಾನ್ ಕಲ್ಕಿಯ ಬಗ್ಗೆ ಇರುವ ಮೂಲಭೂತ ಪರಿಕಲ್ಪನೆಯನ್ನೇ ಬದಲಾಯಿಸಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಬರೆದಿರುವ ಮತ್ತು ವಿವರಿಸಿದ್ದರ ಸಂಪೂರ್ಣ ವಿರುದ್ಧವಾಗಿ ಚಿತ್ರಿಸಲಾಗಿದೆ. ಭಗವಾನ್ ಕಲ್ಕಿ 2898 ಎಡಿ ಸಿನಿಮಾದ ಕಥೆಯ ಚಿತ್ರಣ ಮತ್ತು ವಿವರಣೆ ಸಂಪೂರ್ಣವಾಗಿ ತಪ್ಪಾಗಿದೆ ಮತ್ತು ಸಿನಿಮಾದಲ್ಲಿ ಹಿಂದೂಗಳ ಪವಿತ್ರ ಗ್ರಂಥಗಳನ್ನು ಅವಮಾನಿಸಲಾಗದೆ. ಇದು ಕೋಟಿಗಟ್ಟಲೆ ಹಿಂದೂಗಳು ಮತ್ತು ಕಲ್ಕಿ ಅನುಯಾಯಿಗಳ ಧಾರ್ಮಿಕ ನಂಬಿಕೆಗಳಿಗೆ ನೀಡಿರುವ ಪೆಟ್ಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಲೀಗಲ್ ನೋಟಿಸ್ ನೀಡಿರುವ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಚಲನಚಿತ್ರ ನಿರ್ಮಾಪಕರು 15 ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಅಥವಾ ಸಿನಿಮಾದಲ್ಲಿರುವ ಸಮಸ್ಯೆಗಳನ್ನು 15 ದಿನಗಳಲ್ಲಿ ಬಗೆಹರಿಸಬೇಕು ಎಂದು ಹೇಳಿದ್ದಾರೆ. ಒಂದೊಮ್ಮೆ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಲ್ಕಿ 2898 ಎಡಿ ಸಿನಿಮಾವು ಕಲಿಗಾಲದ ಅಂತ್ಯದ ಕುರಿತಾದ ಕತೆ ಒಳಗೊಂಡಿದೆ. ಕಲ್ಕಿಯ ಜನನವನ್ನು ತಡೆಯಲು ಪ್ರಯತ್ನಿಸುವ ಮಹಾ ಬಲಾಡ್ಯ ವಿಲನ್ ಹಾಗೂ ಕಲ್ಕಿಯನ್ನು ವಿಲನ್‍ನಿಂದ ಕಾಪಾಡುವಲ್ಲಿ ನಿತರತಾಗಿರುವ ಅಶ್ವತ್ಥಾಮ ಹಾಗೂ ಕರ್ಣರ ಕತೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.