ಬೆಂಗಳೂರು, ಜು.22- ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದ ಸ್ಥಳದಲ್ಲಿ ಸೇನೆಯ 40ಕ್ಕೂ ಹೆಚ್ಚು ವೀರಯೋಧರು ಧಾವಿಸಿ, ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ. ಇದಕ್ಕೆ ಡಿಸಿಎಂ ಅವರ ಆಕ್ಷೇಪಣೆ ಇದೆಯಾ? ಈ ಬಗ್ಗೆ ಅವರೇ ಉತ್ತರಿಸಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜಿಲ್ಲಾಡಳಿತ ರಕ್ಷಣಾ ಕಾರ್ಯ ಮಾಡುತ್ತಿಲ್ಲವೆಂದು ನಾನು ಹೇಳಿಲ್ಲ. ಸರ್ಕಾರವನ್ನೂ ಟೀಕಿಸಿಲ್ಲ. ಆದರೂ, ನೊಂದ ಕುಟುಂಬಗಳ ಕಣ್ಣೀರಿಗೆ ಓಗೊಟ್ಟು ವೀರಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದಿದ್ದಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ. ಇಷ್ಟು ಸರಳ ಸಾಮರಸ್ಯ ತತ್ವವೂ ಡಿಸಿಎಂ ಆಗಿರುವ ವ್ಯಕ್ತಿಗೆ ತಿಳಿದಿಲ್ಲ ಎಂದರೆ, ಇದಕ್ಕಿಂತ ತಿಳಿಗೇಡಿತನ ಇನ್ನೊಂದಿಲ್ಲ ಎಂದು ಟೀಕಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು 7 ಜನ ಸಾವನ್ನಪ್ಪಿದ್ದ ಶಿರೂರು ಗ್ರಾಮಕ್ಕೆ ನಾನು ಶನಿವಾರ ಭೇಟಿ ನೀಡಿದಾಗ ಈ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದರು. ಮಿಲಿಟರಿಯನ್ನು ಕರೆತಂದು ಫೀಲ್ಡಿಗೆ ಇಳಿಸಬೇಕಾಗಿತ್ತು. ಅವರೊಬ್ಬರೇ ಬಂದು ಏನು ಮಾಡುತ್ತಾರೆ ಎಂದು ಲಘುವಾಗಿ ಮಾತನಾಡಿದ್ದರು. ಡಿಸಿಎಂ ಅವರು ನನ್ನ ಬಗ್ಗೆ ಲಘುವಾಗಿ ಮಾತನಾಡುವ ಭರದಲ್ಲಿ ನಮ್ಮ ಹೆಮ್ಮೆಯ ಸೇನೆಯನ್ನೂ ಹೀಗಳೆದಿದ್ದರು. ಇದು ದುರ್ದೈವದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.