ನವದೆಹಲಿ,ಜು.23- ಉದ್ಯೋಗಕ್ಕೆ ಸೇರುವ ಎಲ್ಲಾ ಹೊಸ ಉದ್ಯೋಗಿಗಳಿಗೆ ಸರ್ಕಾರವು ಒಂದು ತಿಂಗಳ ವೇತನ ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದು, ಈ ಮೊತ್ತವನ್ನು ಉದ್ಯೋಗಿಗಳಿಗೆ ಭವಿಷ್ಯ ನಿಧಿ ಕೊಡುಗೆಯಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಸತ್‍ನಲ್ಲಿ 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಅವರು, ದೇಶದ 4.1 ಕೋಟಿ ಜನರಿಗೆ ಉದ್ಯೋಗ ನೀಡುವ ದಿಸೆಯಲ್ಲಿ 2 ಲಕ್ಷ ಕೋಟಿ ರೂ. ಪ್ಯಾಕೇಜ್ ಕೂಡ ಘೋಷಣೆ ಮಾಡಿದ್ದಾರೆ. ಇದು ಮೋದಿ ಸರ್ಕಾರದ ಮಹತ್ವದ ಘೋಷಣೆ ಎನಿಸಿದೆ. ಬಜೆಟ್‍ನಲ್ಲಿ ದೇಶದ 9 ವಲಯಗಳಿಗೆ ಆದ್ಯತೆ ನೀಡಲಾಗಿದ್ದು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಆದ್ಯತೆ ಯಾಗಿದೆ ಎಂದು ತಿಳಿಸಿದ್ದಾರೆ.
ಯುವಕ-ಯುವತಿಯರಿಗೆ ಉದ್ಯೋಗ ನೀಡುವ ಜತೆಗೆ 1 ಕೋಟಿ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆದ್ಯತೆ ನೀಡುವಂತೆ ಮಾಡಲಾಗುತ್ತದೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಒಂದು ತಿಂಗಳ ವೇತನವನ್ನು ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಅಂದರೆ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಕೇಂದ್ರ ಸರ್ಕಾರವು ಒಂದು ತಿಂಗಳ ಸಂಬಳವಾಗಿ 15 ಸಾವಿರ ರೂ. ನೀಡುತ್ತದೆ. ಇದರಿಂದ 2.1 ಕೋಟಿ ಯುವಕರಿಗೆ ಅನುಕೂಲವಾಗಲಿದೆ ಎಂದರು.
EPFOಗೆ ನೋಂದಣಿ ಮಾಡಿಕೊಳ್ಳುತ್ತಲೇ ಒಂದು ತಿಂಗಳ ಸಂಬಳವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಉದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಮೊದಲ ಬಾರಿ ಕೆಲಸಕ್ಕೆ ಸೇರಿದವರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಹೇಳಿದರು. ಮಹಿಳೆಯರು ಕೂಡ ಉದ್ಯೋಗ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ, ಯುವತಿಯರಿಗೆ ಕೌಶಲ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆ ಘೋಷಣೆ ಮಾಡುತ್ತಿದ್ದೇವೆ. 5 ವರ್ಷದಲ್ಲಿ ಈ ಯೋಜನೆ ಅಡಿಯಲ್ಲಿ 20 ಲಕ್ಷ ಯುವತಿಯರಿಗೆ ತರಬೇತಿ ನೀಡುವುದಾಗಿ ಘೋಷಣೆ ಮಾಡಿದರು.