Friday, November 22, 2024
Homeರಾಷ್ಟ್ರೀಯ | NationalUnion Budget 2024 Updates ಕೃಷಿಗೆ ನಿರ್ಮಲಾ ಪ್ರಥಮಾದ್ಯತೆ

Union Budget 2024 Updates ಕೃಷಿಗೆ ನಿರ್ಮಲಾ ಪ್ರಥಮಾದ್ಯತೆ

ನವದೆಹಲಿ,ಜು.23- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‍ನಲ್ಲಿ ಪ್ರಥಮ ಆದ್ಯತೆಯನ್ನಾಗಿ ಕೃಷಿ ಉತ್ಪಾದನೆ ಹಾಗೂ ಸ್ಥಿತಿಸ್ಥಾಪಕತ್ವವನ್ನು ಪರಿಗಣಿಸಿದ್ದಾರೆ. ಪ್ರಸಕ್ತ ಬಜೆಟ್‍ನಲ್ಲಿ ಕೃಷಿ ಹಾಗೂ ಅದರ ಸಂಬಂಧಿತ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಕೃಷಿ ಸಂಶೋಧನೆಗಳ ಪರಿವರ್ತನೆಗೆ ನಮ್ಮ ಸರ್ಕಾರ ಒತ್ತು ನೀಡಿದ್ದು, ಉತ್ಪಾದನೆಯ ಹೆಚ್ಚಳ ಮತ್ತು ವೈವಿಧ್ಯಮಯ ಉತ್ಪಾದನೆಗಳ ಅಭಿವೃದ್ಧಿಗೆ ಸಂಶೋಧನೆಯ ವ್ಯವಸ್ಥೆಯನ್ನು ಸಮಗ್ರ ಪುನರ್ ಪರಿಶೀಲಿಸುವುದಾಗಿ ಹೇಳಿದರು.

ಸಂಶೋಧನೆಗೆ ಸರ್ಕಾರ ಮತ್ತು ಅದರ ಆಚೆಗಿನ ಕ್ಷೇತ್ರೀಯ ತಜ್ಞರಿಗೆ ಉತ್ತೇಜನ ನೀಡಲು ಹಣಕಾಸು ಸೌಲಭ್ಯಗಳನ್ನು ಒದಗಿಸಲಾಗುವುದು. ಖಾಸಗಿ ಕ್ಷೇತ್ರದ ಸಹಭಾಗಿತ್ವವನ್ನು ಪಡೆದು ಸವಾಲಿನ ಮಾದರಿಯಲ್ಲಿ ಅಭಿವೃದ್ಧಿಯತ್ತ ಮುಂದಡಿ ಇಡುವುದಾಗಿ ಹೇಳಿದರು. 109 ಹೆಚ್ಚು ಇಳುವರಿಯ ಹೊಸ ತಳಿಗಳು ಹಾಗೂ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿಭಾಯಿಸುವ ತಳಿಗಳನ್ನು ಬಿಡುಗಡೆ ಮಾಡಲಾಗುವುದು. 37 ತೋಟಗಾರಿಕೆ ಹಾಗೂ ಕ್ಷೇತ್ರೀಯ ಅನ್ವೇಷಣೆಗಳನ್ನು ಬೇಸಾಯಕ್ಕಾಗಿ ಸಮರ್ಪಿಸುವುದಾಗಿ ತಿಳಿಸಿದರು.

ಮುಂದಿನ ಎರಡು ವರ್ಷದಲ್ಲಿ ದೇಶಾದ್ಯಂತ 1 ಕೋಟಿ ರೈತರು ನೈಸರ್ಗಿಕ ಕೃಷಿಗೆ ಒಳಗೊಳ್ಳಲಿದ್ದಾರೆ. ಅವರಿಗೆ ಪ್ರಮಾಣೀಕೃತ ಹಾಗೂ ಬ್ರಾಂಡಿಂಗ್ ವ್ಯವಸ್ಥೆಗಾಗಿ ಬೆಂಬಲವನ್ನು ವೈಜ್ಞಾನಿಕ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುವುದು. ಗ್ರಾ.ಪಂ.ಗಳನ್ನು ಒಳಗೊಳ್ಳಲಾಗುವುದು. 10 ಸಾವಿರ ಅವಶ್ಯಕತೆ ಆಧರಿತ ಜೈವಿಕ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ತೈಲ ಬೀಜಗಳು ಹಾಗೂ ಸಿರಿಧಾನ್ಯಗಳ ಸ್ವಾವಲಂಬನೆಗಾಗಿ ಉತ್ಪಾದನೆ, ದಾಸ್ತಾನು, ಮಾರುಕಟ್ಟೆಗೆ ಕಾರ್ಯಯೋಜನೆಯನ್ನು ಮಧ್ಯಂತರ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಅದನ್ನು ಅನುಷ್ಠಾನಗೊಳಿಸುವ ಮೂಲಕ ಸಾಸಿವೆ, ಕಡಲೆಬೀಜ, ಎಳ್ಳು, ಸೂರ್ಯಕಾಂತಿಯಂತಹ ತೈಲಬೀಜಗಳ ಆತ್ಮನಿರ್ಭರ ಭಾರತ ಸಹಕಾರಿಗೆ ಸರ್ಕಾರ ಮುಂದಾಗಿದೆ.

ತರಕಾರಿ ಉತ್ಪಾದನೆ ಹಾಗೂ ಸರಬರಾಜು ಸರಪಳಿಗಾಗಿ ಹೆಚ್ಚು ಬೇಡಿಕೆ ವಲಯಗಳಲ್ಲಿ ಬೃಹತ್ ಕ್ಲಸ್ಟರ್‍ಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೃಷಿ ಉತ್ಪನ್ನ ಹಾಗೂ ತರಕಾರಿ ಸರಬರಾಜು ನವೋದ್ಯಮಗಳನ್ನು ಆರಂಭಿಸಿ ಸಂಗ್ರಹಣೆ, ದಾಸ್ತಾನು, ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವುದಾಗಿ ತಿಳಿಸಿದರು.

ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಬಗ್ಗೆ ವಿವರಣೆ ನೀಡಿದ ನಿರ್ಮಲಾ ಸೀತಾರಾಮನ್ ರಾಜ್ಯಗಳ ಸಹಯೋಗದಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ ಇದನ್ನು ಮತ್ತಷ್ಟು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ರೈತರ ಭೂಮಿಯಲ್ಲಿ ಡಿಪಿಐ ಡಿಜಿಟಲ್ ತಂತ್ರಜ್ಞಾನ ಬಳಸಿ 400 ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ ನಡೆಸಲಾಗುವುದು. 6 ಕೋಟಿ ರೈತರು ಮತ್ತು ಅವರ ಭೂದಾಖಲೆಗಳು ಡಿಜಿಟಲ್ ನೋಂದಣೀಕರಣಕ್ಕೆ ಒಳಪಡಲಿದೆ. ಜನಸಮರ್ಥ್ ಯೋಜನೆಯಡಿ 5 ರಾಜ್ಯಗಳಲ್ಲಿ ಕಿಸಾನ್ ಕಾರ್ಡ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಸೀಗಡಿ ಉತ್ಪಾದನೆ ಮತ್ತು ರಫ್ತಿಗಾಗಿ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದ್ದು, ಸೀಗಡಿ ಸಂತಾನೋತ್ಪತ್ತಿ ಕೇಂದ್ರಗಳ ಸಂಪರ್ಕಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು. ನಬಾರ್ಡ್ ಮೂಲಕ ಉತ್ಪಾದನೆ, ಸಂಸ್ಕರಣೆ, ರಫ್ತಿಗೆ ನೆರವು ನೀಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಸಹಕಾರ ನೀತಿಯನ್ನು ರೂಪಿಸಲಾಗುತ್ತಿದ್ದು, ಕ್ಷೇತ್ರದ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಆರ್ಥಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ವೇಗೋತ್ಕರ್ಷ ನೂತನ ನೀತಿಯ ಗುರಿಯಾಗಿದೆ ಎಂದು ಹೇಳಿದರು.

RELATED ARTICLES

Latest News