Saturday, November 23, 2024
Homeರಾಜ್ಯಪರಿಷತ್ ಪ್ರತಿಪಕ್ಷ ನಾಯಕರಾಗಿ ಛಲವಾದಿ : ಅಧಿಕೃತ ಪ್ರಕಟಣೆ

ಪರಿಷತ್ ಪ್ರತಿಪಕ್ಷ ನಾಯಕರಾಗಿ ಛಲವಾದಿ : ಅಧಿಕೃತ ಪ್ರಕಟಣೆ

ಬೆಂಗಳೂರು,ಜು.24- ವಿಧಾನಪರಿಷತ್ನ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಛಲವಾದಿ ನಾರಾಯಣಸ್ವಾಮಿಯವರ ಹೆಸರನ್ನು ಸಭಾಪತಿ ಬಸವರಾಜ ಹೊರಟ್ಟಿಯವರು ಅಧಿಕೃತವಾಗಿ ಸದನದಲ್ಲಿ ಪ್ರಕಟಿಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರು ನಾರಾಯಣಸ್ವಾಮಿಯವರ ಹೆಸರನ್ನು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅವರನ್ನು ಕರೆತಂದು ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಿದರು.

ನಂತರ ಛಲವಾದಿ ನಾರಾಯಣಸ್ವಾಮಿಯವರಿಗೆ ಸಚಿವರು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಸದಸ್ಯರು ಪಕ್ಷಭೇದ ಮರೆತು ಅಭಿನಂದನೆ ಸಲ್ಲಿಸಿದರು. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ್ರಜಾಪ್ರಭುತ್ವದ ಸೌಂದರ್ಯ ಮತ್ತೆ ಮರುಕಳಿಸಿದೆ ಎಂಬುದಕ್ಕೆ ನಾರಾಯಣಸ್ವಾಮಿಯವರ ಆಯ್ಕೆಯೇ ನಿದರ್ಶನ.

ಪ್ರತಿಯೊಂದು ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕೆಂಬುದು ಸಂವಿಧಾನದ ಆಶಯ. ತಳಸಮುದಾಯದಿಂದ ಬಂದಿರುವ ಅವರಿಗೆ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಇದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ಚಿಂತಕರ ಚಾವಡಿ ಎಂದು ಕರೆಯುವ ಮೇಲನೆಯಲ್ಲಿ ಇನ್ನಷ್ಟು ಗುಣಮಟ್ಟದ ಚರ್ಚೆಯಾಗಲಿ. ಸರ್ಕಾರ ತಪ್ಪುದಾರಿಯಲ್ಲಿ ನಡೆದಾಗ ಸರಿದಾರಿಗೆ ತರುವ ಕೆಲಸವನ್ನು ಮಾಡಲಿ ಎಂದು ಆಶಿಸಿದರು. ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ನಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಪಕ್ಷದ ನಾಯಕರನ್ನು ಛಾಯಾ ಮುಖ್ಯಮಂತ್ರಿ ಎಂದು ಕರೆಯುತ್ತಾರೆ.

ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡಿ ಎಚ್ಚರಿಸುವ ಕೆಲಸ ವಿರೋಧಪಕ್ಷದ ನಾಯಕರಿಂದ ಆಗಬೇಕು. ಕರ್ನಾಟಕದ ವಿಧಾನಪರಿಷತ್ಗೆ ಶತಮಾನಗಳ ಇತಿಹಾಸವಿದೆ. ಹಿಂದೆ ಮೈಸೂರು ರಾಜರ ಆಡಳಿತದಲ್ಲಿ ಈ ವ್ಯವಸ್ಥೆ ಇತ್ತು. ಈಗ ಅದನ್ನು ನಾವೂ ಕೂಡ ಅಳವಡಿಸಿಕೊಂಡಿದ್ದೇವೆ ಎಂದರು. ವಿರೋಧಪಕ್ಷದ ನಾಯಕರು ಸರ್ಕಾರಕ್ಕೆ ನಿರಂತರವಾಗಿ ಎಚ್ಚರಿಕೆ ಕೊಡುವ ಕೆಲಸ ಮಾಡಲಿ. ಒಳ್ಳೆಯ ಕೆಲಸ ಮಾಡಿದಾಗ ಹೊಗಳಬೇಕು, ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸ ಮಾಡಲಿ. ಆದರೆ ವಿರೋಧಕ್ಕಾಗಿ ವಿರೋಧಿಸುವುದು ಬೇಡ ಎಂದು ಮನವಿ ಮಾಡಿದರು.

ಜೆಡಿಎಸ್ನ ಎಸ್.ಎಲ್.ಭೋಜೇಗೌಡ ಮಾತನಾಡಿ, ಛಲವಾದಿ ನಾರಾಯಣಸ್ವಾಮಿಯವರ ಆಯ್ಕೆ ಅತ್ಯುತ್ತಮವಾಗಿದೆ. ಅವರು ಈ ಸ್ಥಾನಕ್ಕೆ ಅರ್ಹರೂ ಹೌದು. ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸದನದಲ್ಲಿ ಗುಣಮಟ್ಟದ ಚರ್ಚೆಯಾಗಬೇಕೆಂಬ ಮಾತುಗಳಿವೆ. ಅದಕ್ಕೆ ಪ್ರತಿಪಕ್ಷದ ನಾಯಕರು ಕೈಜೋಡಿಸಲಿ ಎಂದು ಕಿವಿಮಾತು ಹೇಳಿದರು. ಸಭಾನಾಯಕ ಬೋಸರಾಜು ಮಾತನಾಡಿ, ಛಲವಾದಿ ನಾರಾಯಣಸ್ವಾಮಿಯವರು ಹೋರಾಟದ ಹಿನ್ನೆಲೆಯಲ್ಲಿ ಬಂದವರು. ಅವರೂ ನಾವೂ ಒಂದೇ ಪಕ್ಷದಲ್ಲಿದ್ದವರು. ಈಗ ಅತ್ಯಂತ ಮಹತ್ವದ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಲಿ ಎಂದು ಆಶಿಸಿದರು.

ಬಿ.ಕೆ.ಹರಿಪ್ರಸಾದ್ ಮಾತನಾಡಿ, ಪ್ರತಿಪಕ್ಷದ ನಾಯಕನ ಸ್ಥಾನ ಅತ್ಯಂತ ಮಹತ್ವದ್ದು. ಮುಖ್ಯಮಂತ್ರಿ ಬಿಟ್ಟರೆ ಅತಿ ಹೆಚ್ಚು ಜವಾಬ್ದಾರಿ ಅವರಿಗಿರುತ್ತದೆ. ಸರ್ಕಾರ ತಪ್ಪು ಮಾಡಿದಾಗ ಛಾಟಿ ಬೀಸಬೇಕು. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ವಿರೋಧಿಸಬಾರದು ಎಂದು ಸಲಹೆ ಮಾಡಿದರು. ಸಿ.ಟಿ.ರವಿ ಮಾತನಾಡಿ, ಪಕ್ಷವು ಅವರಿಗೆ ಅತ್ಯಂತ ಮಹತ್ವದ ಹುದ್ದೆ ನೀಡಿದೆ. ಜನರ ಆಶಯಕ್ಕೆ ತಕ್ಕಂತೆ ಅವರು ಕೆಲಸ ಮಾಡಬೇಕು ಎಂದು ಹೇಳಿದರು. ಸದಸ್ಯರಾದ ಶಶಿಲ್ ನಮೋಶಿ, ಉಮಾಶ್ರೀ, ಸಲೀಂ ಅಹಮದ್, ಸಂಕನೂರು, ಶರವಣ ಸೇರಿದಂತೆ ಅನೇಕರು ಮಾತನಾಡಿದರು.

RELATED ARTICLES

Latest News