ಬೆಂಗಳೂರು,ಜು.24- ಮೈಸೂರಿನ ಮೂಡ ಹಗರಣದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಬೇಕೆಂದು ವಿಧಾನ ಸಭೆಯಲ್ಲಿ ಬಿಜೆಪಿ ಪಟ್ಟುಹಿಡಿದ ಕಾರಣ ಆಡಳಿತ ಮತ್ತು ಪ್ರತಿಪಕ್ಷ ನಡುವೆ ಕೆಲಕಾಲ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನಿಲುವಳಿ ಸೂಚನೆ ಪೂರ್ವಬಾವಿ ಪ್ರಸ್ತಾಪ ಮಾಡಲು ಅವಕಾಶ ನೀಡಬೇಕು, ಪ್ರಶ್ನೋತ್ತರ ಬದಿಗೊತ್ತಿ ಅವಕಾಶ ನೀಡಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ಅವರಲ್ಲಿ ಮನವಿ ಮಾಡಿದರು.
ಸಿಎಂ ಅವರ ಮೇಲೆ ಆರೋಪವಿದೆ ಮೂರ್ನಾಲ್ಕು ಸಾವಿರ ಕೋಟಿ ಹಗರಣವಾಗಿದೆ, ಚರ್ಚೆ ಮಾಡದಿದ್ದರೆ ಜನತೆ ಮುಚ್ಚಿ ಹಾಕುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ ಎಂದರು. ಆಗ ಸಭಾಧ್ಯಕ್ಷರು, ಅಷ್ಟೊಂದು ಮಹತ್ವದ ವಿಚಾರವಾಗಿದ್ದರೆ ಅಧಿವೇಶನದ ಮೊದಲ ದಿನವೇ ನೋಟಿಸ್ ನೀಡಬೇಕಿತ್ತು. 10 ದಿನ ಏಕೆ ತಡ ಮಾಡಿದ್ದೀರಿ , ಈ ವಿಚಾರದಲ್ಲಿ ಮನವರಿಕೆ ಮಾಡಿಕೊಡುವ ಅಗತ್ಯವಿಲ್ಲ . 2 ವರ್ಷದ ಹಳೆಯ ವಿಚಾರ, ಆರೋಪದ ಬಗ್ಗೆ ನ್ಯಾಯಾಂಗ ಆಯೋಗ ತನಿಖೆ ನಡೆಸುತ್ತಿದೆ, ನೀವು ಗಡಿಬಿಡಿ ಮಾಡಬೇಡಿ, ಕೆಟ್ಟ ಸಂಪ್ರದಾಯ ಬೇಡ, ಪ್ರಶ್ನೋತ್ತರ ಕಲಾಪಕ್ಕೆ ಸಹಕಾರ ನೀಡಿ ಎಂದು ಕೋರಿದರು.
ಬಿಜೆಪಿ ಶಾಸಕ ಸುನೀಲ್ಕುಮಾರ್ ಮಾತನಾಡಿ, ಆಯೋಗದಲ್ಲಿ ತನಿಖೆ ನಡೆಯುತ್ತಿದ್ದರೆ ಸದನದಲ್ಲಿ ಚರ್ಚೆ ಮಾಡುವುದು ಬೇಡ ಎಂದಾದರೆ ಸದನ ನಡೆಸುವುದು ಏಕೆ ಮುಂದೂಡಿ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಎದ್ದುನಿಂತು ಪ್ರತಿಯಾಗಿ ಮಾತನಾಡಲು ಮುಂದಾದಾಗ ಬಿಜೆಪಿ ಶಾಸಕರೂ ಸಹ ಮಾತನಾಡಲು ಮುಂದಾಗುತ್ತಿದ್ದಂತೆ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಮಾತನಾಡಿ, ಮೂಡ ವಿಚಾರ ಚರ್ಚೆ ಮಾಡದಿದ್ದರೆ ಪ್ರತಿಪಕ್ಷ, ಆಡಳಿತ ಪಕ್ಷದ ಜೊತೆ ಕೈಜೋಡಿಸಿದ್ದಾರೆ ಎಂಬ ಅಪವಾದ ಬರುತ್ತದೆ. ಮುಖ್ಯಮಂತ್ರಿಯವರ ಮೇಲೆ ನೇರ ಆರೋಪ ಇರುವುದರಿಂದ ಚರ್ಚೆಗೆ ಅವಕಾಶ ಕೊಡಬೇಕು ಎಂದರು. ಸಚಿವ ಭೈರತಿ ಸುರೇಶ್ ಮಾತನಾಡಿ, ಇಡೀ ಜಾತಕವಿದೆ ಎಂದು ಕಡತವೊಂದನ್ನು ಪ್ರದರ್ಶಿಸಿದರು.
ಆ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಪ್ರಶ್ನೋತ್ತರ ಪ್ರಾರಂಭವಾಗಲಿ, ಅನಗತ್ಯ ಗೊಂದಲ ಬೇಡ, ಪ್ರತಿಪಕ್ಷ ಆರೋಪಿಸುತ್ತಿರುವ ವಿಚಾರದ ಬಗ್ಗೆ ತನಿಖಾ ಆಯೋಗ ನೇಮಕವಾಗಿದೆ. ಅದನ್ನು ಸ್ವಾಗತಿಸುವುದನ್ನು ಬಿಟ್ಟು ಗೊಂದಲ ಸೃಷ್ಟಿಸುವುದು ಬೇಡ ಎಂದರು.
ಬಿಜೆಪಿಯ ಅರಗ ಜ್ಞಾನೇಂದ್ರ ಮಾತನಾಡಿ, ಮೂಡ ಹಗರಣದ ಕಡತವನ್ನು ನೀವೇಕೆ ತುಂಬಿಕೊಂಡು ಬಂದಿದ್ದೀರ ಎಂದು ಕಾಂಗ್ರೆಸ್ ಶಾಸಕರನ್ನು ಛೇಡಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಎಲ್ಲಾ ಪಕ್ಷದವರೂ ಇದ್ದಾರೆ ಎಂದು ಹೇಳುತ್ತಾರೆ. ಅದು ಬಹಿರಂಗವಾಗಲಿ, ಚರ್ಚೆಗೆ ಅವಕಾಶ ಕೊಡಿ ಎಂದರು.
ಮತ್ತೆ ಮಾತನಾಡಿದ ಕಾನೂನು ಸಚಿವರು, ಹಳೆ ವಿಚಾರವನ್ನು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಲು ಆಗುವುದಿಲ್ಲ ಎಂದು ಹೇಳಿದರು.
ಸಚಿವ ಭೈರತಿ ಸುರೇಶ್ ಮಾತನಾಡಿ, ಬಿಜೆಪಿ ಮಾಡಿರುವ ಅನಾಚಾರದ ಬಗ್ಗೆ ಒಂದು ಬಂಡಿ ಇದೆ. ಕೇವಲ ಒಬ್ಬರನ್ನು ಗುರಿ ಮಾಡುವುದಲ್ಲ. ಸುಳ್ಳು ವಿಳಾಸ ನೀಡಿ ಎಕರೆಗಟ್ಟಲೆ ಪಡೆದಿದ್ದಾರೆ ಎಂದು ಆರೋಪಿಸಿದರು. ಅಶ್ವತ್ಥನಾರಾಯಣ ಮಾತನಾಡಿ, ಸದನದಲ್ಲಿ ಚರ್ಚೆಯಾಗದಿದ್ದರೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುತ್ತಾರೆ. ಅದಕ್ಕಾಗಿ ಅವಕಾಶ ಕೊಡಿ ಎಂದರು.
ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಮಾತನಾಡಿ, ಮುಖ್ಯಮಂತ್ರಿ ಮೇಲೆ ನೇರ ಆರೋಪವಿದೆ. ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಯಾರ್ಯಾರು ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದಾರೆ ಎಂಬುದನ್ನು ಜನರಿಗೆ ತೋರಿಸಿ ಅಂತವರನ್ನು ಮನೆಗೆ ಕಳುಹಿಸಿ. ಮುಂದಿನ ಚುನಾವಣೆಯಲ್ಲಿ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು ಎಂದರು. ಆಡಳಿತ ಹಾಗೂ ಪ್ರತಿಪಕ್ಷದ ನಾಯಕರನ್ನು ಸಮಾಧಾನಪಡಿಸಿದ ಸಭಾಧ್ಯಕ್ಷರು ಗಡಿಬಿಡಿ ಬೇಡ ಎಂದು ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು.
ಆಗ ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಎದ್ದುನಿಂತು ಪ್ರಶ್ನೋತ್ತರ ಕಲಾಪದ ನಂತರ ಅವಕಾಶ ಮಾಡಿಕೊಡುತ್ತೀರ ಎಂಬ ಬಗ್ಗೆ ಸ್ಪಷ್ಟನೆಯನ್ನು ಸಭಾಧ್ಯಕ್ಷರಿಂದ ಕೇಳಬಯಸಿದರು. ಸುದೀರ್ಘ ಒತ್ತಾಯದ ನಂತರ ಈಗ ಪ್ರಶ್ನೋತ್ತರ ಕಲಾಪ ನಡೆಯಲಿ. ಅನಂತರ ಆ ಬಗ್ಗೆ ಪರಿಶೀಲನೆ ಮಾಡೋಣ ಎಂದಾಗ ಬಿಜೆಪಿ ಶಾಸಕರು ಸುಮನಾದರು.