ಬಾಗೇಪಲ್ಲಿ,ಜು.24- ಜಮೀನು ವಿವಾದದ ಹಿನ್ನೆಲೆಯಲ್ಲಿ ಟೈಲರ್ ಒಬ್ಬ ತನ್ನ ಅಣ್ಣ ಹಾಗೂ ಅಣ್ಣನ ಮಗನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪಿಸ್ತೂಲ್ನಿಂದ ಗುಂಡಿಕ್ಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಇಂದು ಬೆಳ್ಳಂಬೆಳಿಗ್ಗೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂಪಸಂದ್ರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ನಜೀರ್ ಅಹಮದ್ (55) ಎಂದು ಗುರುತಿಸಲಾಗಿದೆ. ಮಹಮದ್ ಬಷೀರ್ (65) ಕೊಲೆ ಆರೋಪಿ.
ಘಟನೆಯ ವಿವರ: ಇಂದು ಬೆಳಗಿನ ಜಾವ 5.15ರ ಸಮಯದಲ್ಲಿ ಮೃತ ನಜೀರ್ ಅಹಮದ್ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋಗುತ್ತಿದ್ದಾಗ ಹೊಂಚು ಹಾಕಿ ಕಾದು ಕುಳಿತಿದ್ದ ಮಹಮದ್ ಬಷೀರ್ ಏಕಾಏಕಿ ಮಚ್ಚಿನಿಂದ ಹಲ್ಲೆಮಾಡಿ ನಂತರ ತನ್ನ ಬಳಿ ಇದ್ದ ಪಿಸ್ತೂಲ್ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡು ನಜೀರ್ ಅಹಮದ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ನಂತರ ಕೊಲೆಗಾರ ಬಷೀರ್ ಕೂಗಳತೆ ದೂರದಲ್ಲಿದ್ದ ತನ್ನ ಅಣ್ಣ ಹಾಗೂ ಮೃತ ನಜೀರ್ರವರ ತಂದೆ ಮಹಬೂಬ್ ಸಾಬ್ (80) ಎಂಬುವವರ ಮೇಲೂ ಕೂಡ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಪಿಸ್ತೂಲಿನ ಶಬ್ದಕ್ಕೆ ಬೆಚ್ಚಿಬಿದ್ದ ಜನರು ಹೊರ ಬಂದಾಗ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಪಟ್ಟಣದ ಕೊತ್ತಪಲ್ಲಿ ರಸ್ತೆಯಲ್ಲಿರುವ ತನ್ನ ಹೆಂಡತಿಯನ್ನು ಕೊಲೆ ಮಾಡಲು ಮಚ್ಚು ಮತ್ತು ಪಿಸ್ತೂಲ್ನೊಂದಿಗೆ ಹೋಗಿದ್ದಾನೆ. ಹಂಪಸಂದ್ರ ಗ್ರಾಮದಲ್ಲಿ ನಡೆದ ಕೊಲೆಯ ಬಗ್ಗೆ ಮಾಹಿತಿ ತಿಳಿದಿದ್ದ ಪೊಲೀಸರು ಬಾಗೇಪಲ್ಲಿ ಪಟ್ಟಣದ ಕೊಲೆಗಾರನ ಹೆಂಡತಿಗೆ ಮಾಹಿತಿ ನೀಡಿ ಬಾಗಿಲು ತೆರೆಯದಂತೆ ತಿಳಿಸಿದ್ದಾರೆ.
ಮನೆಯ ಬಳಿ ಹೋದ ಕೊಲೆಗಾರ ಬಾಗಿಲು ಬಡಿದಿದ್ದು ಬಾಗಿಲು ತೆಗೆಯದಿದ್ದಾಗ ಸ್ವಲ್ಪಹೊತ್ತು ಕಾದು ವಾಪಸ್ಸಾಗುವಾಗ ಪೊಲೀಸರು ಕೊಲೆ ಗಾರನನ್ನು ಬಂಧಿಸಿ ಪಿಸ್ತೂಲ್ ಹಾಗೂ ಮಚ್ಚನ್ನು ವಶಪಡಿಸಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ಮಹಬೂಬ್ ಸಾಬ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ.
ಆರೋಪಿ ಕೆಲವರ್ಷಗಳಿಂದ ಸೌದಿಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ಇತ್ತೀಚೆಗೆ ಗ್ರಾಮಕ್ಕೆ ವಾಪಸ್ ಬಂದು ಇಲ್ಲಿಯೂ ಕೂಡ ಟೈಲರ್ ವೃತ್ತಿ ಮಾಡಿಕೊಂಡಿದ್ದ. ಆಸ್ತಿ ವಿಚಾರವಾಗಿ ಜಗಳ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಇದೇ ವಿಚಾರವಾಗಿ ಕೊಲೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಷಾಲ್ ಚೌಕ್ಸೆ, ಅಡಿಷನಲ್ ಎಸ್.ಪಿ. ಖಾಸಿಂ, ಡಿ.ವೈ.ಎಸ್.ಪಿ. ಶಿವಕುಮಾರ್, ಸರ್ಕಲ್ ಇನ್ಸಪೆಕ್ಟರ್ ನಯಾಜ್ ಬೇಗ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕರೆಸಲಾಗಿತ್ತು.