ಬೆಂಗಳೂರು,ಜು.24- ಬಿಬಿಎಂಪಿ ಕೇಂದ್ರ ಕಚೇರಿ ಯಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದ ಎಂಜಿನಿಯರ್ ಪತ್ನಿ ಹಾಗೂ ಗಾಯಗೊಂಡಿದ್ದ ಮೂವರು ಸಿಬ್ಬಂದಿಗಳಿಗೆ ಸರ್ಕಾರಿ ಕೆಲಸ ನೀಡಲಾಗಿದೆ. ಕಳೆದ ವರ್ಷ ಆ. 8 ರಂದು ಬಿಬಿಎಂಪಿಯ ಗುಣ ಮಟ್ಟ ಪರೀಕ್ಷಾ ಕೇಂದ್ರದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಈ ದುರಂತದಲ್ಲಿ 13 ಜನ ಪಾಲಿಕೆ ಸಿಬ್ಬಂದಿಗಳು ಗಾಯಗೊಂಡಿದ್ದು, ಎಂಜಿನಿಯರ್ ಶಿವಕುಮಾರ್ ಮೃತಪಟ್ಟಿದ್ದರು.
ಇದೀಗ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮೂವರು ಸಿಬ್ಬಂದಿಗಳಿಗೆ ಹಾಗೂ ಮತಪಟ್ಟ ಎಂಜಿನಿಯರ್ ಶಿವಕುಮಾರ್ ಪತ್ನಿಗೆ ಸರ್ಕಾರಿ ಕೆಲಸ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಘಟನೆ ಬಳಿಕ ಬಿಬಿಎಂಪಿ ಅಯುಕ್ತರು ಘಟನೆಯಲ್ಲಿ ಮತ ಪಟ್ಟ ಹಾಗೂ ಗಾಯಗೊಂಡ ಸಿಬ್ಬಂದಿಗಳಿಗೆ ಅನುಕಂಪದ ಅಧಾರದ ಮೇಲೆ ಕೆಲಸ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಬಿಬಿಎಂಪಿ ಆಯುಕ್ತರ ಮನವಿಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಮತ ಇಂಜಿನಿಯರ್ ಪತ್ನಿ ಸೇರಿದಂತೆ ನಾಲ್ವರಿಗೆ ಖಾಯಂ ಉದ್ಯೋಗ ಕಲ್ಪಿಸಲು ಅವಕಾಶ ನೀಡಿದೆ.
ಹೀಗಾಗಿ ಮತ ಇಂಜಿನಿಯರ್ ಶಿವಕುಮಾರ್ ಪತ್ನಿ ಉಮಾಮಹೇಶ್ವರಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್, ಜ್ಯೋತಿ ಹಾಗೂ ಮನೋಜ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲೇ ಖಾಯಂ ಉದ್ಯೋಗ ಕಲ್ಪಿಸಲಾಗಿದೆ. ಇನ್ನು ಮುಂದೆ ಈ ನಾಲ್ವರು ಗ್ರೂಪ್ ಸಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.