ಬೆಂಗಳೂರು,ಜು.25- ವಿಧಾನಸೌಧದಲ್ಲಿ ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಿಪಕ್ಷಗಳ ಧರಣಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.ಈ ಬಗ್ಗೆ ಮಾತನಾಡಿದ ಅವರು, ನಿನ್ನೆ ಪ್ರತಿಪಕ್ಷದವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಿಲುವಳಿ ಪ್ರಸ್ತಾಪ ಏಕೆ ಮಾಡಬಾರದು ಎನ್ನುವುದನ್ನು ವಿವರಿಸಿದ್ದಾರೆ.
ಇಷ್ಟೆಲ್ಲಾ ಇದ್ದರೂ ಅವರು ಧರಣಿ ಮಾಡಿದ್ದಾರೆ. ರಾಜಕೀಯ ತಂತ್ರಕ್ಕೆ ಅವರು ವಿಧಾನಸಭಾ ಅಧಿವೇಶನ ಉಪಯೋಗ ಮಾಡಿಕೊಂಡಿದ್ದಾರೆ. ಈಗಾಗಲೇ ಈ ತನಿಖೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೂಲಕ ನಡೆಸಲಾಗುತ್ತಿದೆ.
ಆಪಾದನೆ ಅವರ ಮೇಲಿದ್ದರೂ ಸಿಎಂ ತನಿಖೆಗೆ ಆಯೋಗ ರಚಿಸಿದ್ದಾರೆ. ತನ್ನ ಮೇಲೆ ಆಪಾದನೆ ಇದ್ದಾಗ ಯಾರಾದರೂ ಒಬ್ಬ ಮುಖ್ಯಮಂತ್ರಿ ತನಿಖಾ ಆಯೋಗ ರಚಿಸಿರುವ ಉದಾಹಣೆ ಇದೆಯಾ? ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ ಬೊಮಾಯಿ ಆಯೋಗ ರಚನೆ ಮಾಡಿದರಾ? ವಿರೋಧ ಪಕ್ಷ ಸಿಎಂ ನಿಲುವನ್ನು ಪ್ರಶಂಸೆ ಮಾಡಬೇಕಿತ್ತು. ಇದು ಕೇವಲ ರಾಜಕೀಯ ನಾಟಕ ಅಷ್ಟೆ. ಭಾರಿ ಮಳೆಯಿಂದ ಉತ್ತರ ಕನ್ನಡದಲ್ಲಿ, ಮಲೆನಾಡಲ್ಲಿ ಸಾಕಷ್ಟು ಅನಾಹುತ ಆಗಿದೆ. ಆದರೆ ಇದರ ಬಗ್ಗೆ ಚರ್ಚೆ ಮಾಡಿಲ್ಲ.
ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಬಿಲ್ ಇದೆ. ನೀಟ್ ವಿರೋಧಿಸಿ ಸಿಇಟಿ ಮರು ಸ್ಥಾಪಿಸುವ ಬಿಲ್ ಇದೆ. ಹತ್ತಾರು ಜನರ ಪರವಾದ ಬಿಲ್ ಬಗ್ಗೆ ಮಾತನಾಡುತ್ತಿಲ್ಲ. ವಿಪಕ್ಷಗಳ ಧರಣಿ ಕೇವಲ ರಾಜಕೀಯ ನಾಟಕವಷ್ಟೇ ಎಂದು ಆಕ್ಷೇಪಿಸಿದರು.