Friday, November 22, 2024
Homeರಾಜ್ಯವಿಧಾನಪರಿಷತ್‌ನಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೂ ಹಲವು ವಿಧೇಯಕಗಳ ಮಂಡನೆ

ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೂ ಹಲವು ವಿಧೇಯಕಗಳ ಮಂಡನೆ

ಬೆಂಗಳೂರು,ಜು.25- ಪ್ರತಿಪಕ್ಷಗಳ ಸದಸ್ಯರ ತೀವ್ರ ಗದ್ದಲದ ನಡುವೆಯೂ ವಿಧಾನಪರಿಷತ್‌ನಲ್ಲಿ ಕರ್ನಾಟಕ ಧನ ವಿನಿಯೋಗ ವಿಧೇಯಕ-2024 ಸೇರಿದಂತೆ ಹಲವು ವಿಧೇಯಕಗಳನ್ನು ಮಂಡಿಸಲಾಯಿತು. ಮುಡಾ ಹಗರಣ ಕುರಿತು ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌‍ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಬಸವರಾಜ ಹೊರಟ್ಟಿಯವರು ವಿಧೇಯಕ ಮಂಡಿಸಲು ಸೂಚಿಸಿದರು.

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2024ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕ-2024ನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿ ವಿಧೇಯಕವನ್ನು ಅಂಗೀಕರಿಸಬೇಕೆಂದು ಸದಸ್ಯರಿಗೆ ಮನವಿ ಮಾಡಿದರು.

ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಅವರು ವಿಧಾನಸಭೆಯಿಂದ ಅಂಗೀಕೃತವಾಗಿರುವ 2024ನೇ ಸಾಲಿನ ಕರ್ನಾಟಕ ವಿಧಾನಮಂಡಲ ವಿಧೇಯಕವನ್ನು ಮಂಡಿಸಿದರು.

ನಂತರ ವಿಧೇಯಕವನ್ನು ಅಂಗೀಕರಿಸಲಾಗಿದೆ ಎಂದು ಸಭಾಪತಿಗಳು ಘೋಷಣೆ ಮಾಡಿದರು. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಎನ್‌.ಎಸ್‌‍.ಭೋಸರಾಜ ಅವರು ಚುನಾವಣಾ ಪ್ರಸ್ತಾವನೆಗಳನ್ನು ಮಂಡಿಸಿದರು. ವಿಧಾನಮಂಡಲ ಹಾಗೂ ವಿಧಾನಪರಿಷತ್‌ನ ವಿವಿಧ ಸಮಿತಿಗಳಿಗೆ ಚುನಾವಣೆ ನಡೆಸುವ ಬದಲು ಸದಸ್ಯರುಗಳನ್ನು ನಾಮನಿರ್ದೇಶಿಸಲು ಸಭಾಪತಿಯವರಿಗೆ ಅಧಿಕಾರ ನೀಡುವ ಪ್ರಸ್ತಾವನೆಯನ್ನು ಮಂಡಿಸಿದ ನಂತರ ಅಂಗೀಕರಿಸಲಾಯಿತು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್‌ಗೆ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಸಲಹಾ ಮಂಡಳಿಗೆ ಚುನಾವಣೆ ನಡೆಸುವ ಬದಲು ಸದಸ್ಯರುಗಳನ್ನು ನಾಮನಿರ್ದೇಶಿಸಲು ಸಭಾಪತಿಯವರಿಗೆ ಅಧಿಕಾರ ನೀಡುವ ಪ್ರಸ್ತಾವನೆಯನ್ನು ಮಂಡಿಸಿದ ನಂತರ ಸದನವು ಅಂಗೀಕಾರ ನೀಡಿತು.

ವಿಧಾನಪರಿಷತ್‌ನ ನಿಯಮಾವಳಿ ಸಮಿತಿಗೆ ಶಾಸಕರನ್ನು ನಾಮನಿರ್ದೇಶನ ಮಾಡುವ ಸಭಾಪತಿಯವರಿಗೆ ಅಧಿಕಾರ ನೀಡುವ ಮತ್ತೊಂದು ಪ್ರಸ್ತಾವನೆ ಮಂಡನೆ ಮಾಡಲಾಯಿತು. ನಂತರ ವರದಿಗಳನ್ನು ಒಪ್ಪಿಸಲು ಸಭಾಪತಿಯವರು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಿದರು.

ಸದಸ್ಯರಾದ ಆರ್‌.ರಾಜೇಂದ್ರ ರಾಜಣ್ಣ ಅವರು 2023-24ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಮೂರನೇ ವರದಿಯನ್ನು ಒಪ್ಪಿಸಿದರು.

ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌ ಅವರು 2023-24ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಮೊದಲನೆ ವರದಿಯನ್ನು ಸದನಕ್ಕೆ ಒಪ್ಪಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರುಗಳು ನಿರ್ಣಯಗಳನ್ನು ಮಂಡಿಸಿದರು.

RELATED ARTICLES

Latest News