ಬೆಂಗಳೂರು,ಜು.26- ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಬಿಜೆಪಿ-ಜೆಡಿಎಸ್‌ನ ಸಂಸದರು, ರಾಜ್ಯಸಭಾ ಸದಸ್ಯರು ಸಂಸತ್‌ನಲ್ಲಿ ಎಂದಾದರೂ ಧ್ವನಿಯೆತ್ತಿದ್ದಾರೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಸತ್‌ನಲ್ಲಿ ಜೆಡಿಎಸ್-ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿರುವುದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿಯವರು, ರಾಜ್ಯಕ್ಕೆ ನಿರಂತರವಾಗಿ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ತೆರಿಗೆ ಹಂಚಿಕೆಯಿಂದ ಆರಂಭಗೊಂಡು ಮೊನ್ನೆ ಮಂಡನೆಯಾದ ಬಜೆಟ್‌ನಲ್ಲೂ ಅನ್ಯಾಯ ಮುಂದುವರೆದಿದೆ. ಇದರ ಬಗ್ಗೆ ಜೆಡಿಎಸ್-ಬಿಜೆಪಿಯ ಸಂಸದರು ಧ್ವನಿಯನ್ನೇ ಎತ್ತಿಲ್ಲ ಎಂದು ಆಕ್ಷೇಪಿಸಿದರು.
ಸಂಸತ್‌ನ ಒಳಗೆ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್‌ನ ಸದಸ್ಯರು ಪ್ರತಿಭಟನೆ ನಡೆಸಿರುವುದು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರ್ಕಾರದ ಹೆಸರಿಗೆ ಮಸಿ ಬಳಿಯುವ ರಾಜಕೀಯ ಹುನ್ನಾರ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ.
ಕಳೆದ ಲೋಕಸಭೆ ಅವಧಿಯಲ್ಲಿ ರಾಜ್ಯದಿಂದ 25 ಜನ ಸಂಸದರು ಗೆದ್ದಿದ್ದರು. ಎಂದಾದರೂ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆಯೇ?, ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಸ್ತಾಪಿಸಿದ್ದಾರೆಯೇ?, ಮುಡಾ ಪ್ರಕರಣವನ್ನು ಪ್ರಸ್ತಾಪ ಮಾಡುತ್ತಾರೆ. ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದ್ದರೂ ಪ್ರಸ್ತಾಪ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.