ತುಮಕೂರು, ಜು.27- ಕೊಲೆಯತ್ನ ಪ್ರಕರಣ ಸಂಬಂಧ ಸ್ಥಳ ಮಹಜರಿಗೆ ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದಿದ್ದಾನೆ.
ಕಳೆದ ನಾಲ್ಕು ದಿನಗಳ ಹಿಂದೆ ನಗರದಲ್ಲಿ ಎರಡು ರೌಡಿ ಗುಂಪುಗಳ ನಡುವೆ ಪರಸ್ಪರ ಹೊಡೆದಾಡಿಕೊಂಡು ಕೊನೆಗೆ ಇಬ್ಬರ ಮೇಲೆ ಕೊಲೆ ಯತ್ನ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ತುಮಕೂರು ನಗರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮನು ಅಲಿಯಾಸ್ ಮನೋಜ್ ಎಂಬಾತನನ್ನು ಸ್ಥಳ ಮಹಜರಿಗಾಗಿ ನಗರದ ಹೊರವಲಯದ ದಿಬ್ಬೂರು ಬಳಿ ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ಡ್ರಾಗರ್ ನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದ.
ಪೊಲೀಸರ ಎಚ್ಚರಿಕೆಯನ್ನು ಸಹ ಲೆಕ್ಕಿಸದೆ ಪೊಲೀಸ್ ಸಿಬ್ಬಂದಿ ಚೇತನ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ ಆರೋಪಿ ಮನೋಜ್‌ಗೆ ಎಚ್ಚರಿಕೆ ನೀಡಿದ ಸಿಪಿಐ ದಿನೇಶ್ ಕುಮಾರ್ ಅವರು ಕೊನೆಗೆ ಆತ ರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಮನೋಜ್ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ಆರೋಪಿ ಮನೋಜ್ ನಗರದ ರೌಡಿ ಶೀಟರ್, ಈತ ರೋಹಿತ್ ಅಲಿಯಾಸ್ ಕ್ಯಾಟ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದನು.ರೌಡಿ ಮನೋಜ್ ಮೂಲತಃ ಆಂಧ್ರ ಪ್ರದೇಶ ಜಿಲ್ಲೆಯ ಸತ್ಯಸಾಯಿ ಜಿಲ್ಲೆಯವನಾಗಿದ್ದು ನಗರದ ಬಿಎಂ ಪಾಳ್ಯದಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಪೊಲೀಸರು ಗುಂಡು ಹಾರಿಸಿದ ಸಂದರ್ಭದಲ್ಲಿ ಸಿಬ್ಬಂದಿ ಚೇತನ್ ಸಹ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆಯಲ್ಲಿ ಗುಂಡೆಟು ತಿಂದಿರುವ ಆರೋಪಿ ಮನೋಜ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಘಟನೆಯ ಸಂಬಂಧ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ,ಡಿವೈಎಸ್ ಪಿ ಚಂದ್ರೇಖರ್ ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.