ಜೈಪುರ,ಜು.27- ರಾಜಸ್ಥಾನದ ಮಹಿಳಾ ಶಿಕ್ಷಕಿ ಬುಡಕಟ್ಟು ಮಹಿಳೆಯರಿಗೆ ಸಿಂಧೂರ ಮತ್ತು ಮಂಗಳಸೂತ್ರವನ್ನು ಧರಿಸದಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ರಾಜಸ್ಥಾನ ಶಿಕ್ಷಣ ಇಲಾಖೆ ಅವರನ್ನು ಕೆಲಸದಿಂದ ಅಮಾನತುಗೊಳಿಸಿದೆ.
ಜುಲೈ 19ರಂದು ಬನ್ಸಾರಾದ ಮಂಗರ್ ಧಾಮ್‌ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಶಿಕ್ಷಕಿ ದಾರ್ಮೋ ಬುಡಕಟ್ಟು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಲವು ಸಾಂಪ್ರದಾಯಿಕ ಹಿಂದೂ ಆಚರಣೆಗಳನ್ನು ತಿರಸ್ಕರಿಸುವಂತೆ ಸಲಹೆ ನೀಡಿದ್ದರು.
ಶಿಕ್ಷಕಿ ಮೇನಕಾ ದಾರ್ಮೋ ತಮ ಭಾಷಣದಲ್ಲಿ, ಬುಡಕಟ್ಟು ಕುಟುಂಬಗಳು ಸಿಂಧೂರವನ್ನು ಹಚ್ಚುವುದಿಲ್ಲ, ಅವರು ಮಂಗಳಸೂತ್ರವನ್ನು ಧರಿಸುವುದಿಲ್ಲ. ಬುಡಕಟ್ಟು ಸಮಾಜದಲ್ಲಿ ಯುವತಿಯರು ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದಿನಿಂದ, ಎಲ್ಲಾ ಉಪವಾಸಗಳನ್ನು ಆಚರಿಸುವುದನ್ನು ನಿಲ್ಲಿಸಿ. ನಾವು ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಬುಡಕಟ್ಟು ಸಮುದಾಯದ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಶಿಕ್ಷಕಿ ದಾರ್ಮೋ ಅವರನ್ನು ಅಮಾನತುಗೊಳಿಸಿದ್ದಾರೆ. ರಾಜಸ್ಥಾನ ನೀತಿ ನಿಯಮಗಳನ್ನು ಉಲ್ಲಂಸಿದ್ದಕ್ಕಾಗಿ ಮತ್ತು ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದ ಮೇಲೆ ದಾರ್ಮೋ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕಿ ಮೇನಕಾ ದಾರ್ಮೋ ಅವರು ಆದಿವಾಸಿ ಪರಿವಾರ ಸಂಸ್ಥೆಯ ಸ್ಥಾಪಕಿಯಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ಸಾದಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.
ಮಗರ್ ಧಾಮ್‌ನಲ್ಲಿ ನಡೆದ ರ್ಯಾಲಿ ವಿಶಾಲವಾದ ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ವೇದಿಕೆಯಾಯಿತು. ಇದು ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟದ ಬುಡಕಟ್ಟು ಸಮುದಾಯಗಳಿಂದ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ. ದಾರ್ಮೋ ಅವರ ವಿವಾದಾತಕ ಭಾಷಣದ ಜೊತೆಗೆ, ಭಿಲ್ ರಾಜ್ಯವನ್ನು ರಚಿಸಬೇಕೆಂದು ಪ್ರತಿಪಾದಿಸುವ ರಾಜಕೀಯ ನಿರ್ಣಯವನ್ನು ಸಹ ಈ ಸಂದರ್ಭದಲ್ಲಿ ಅಂಗೀಕರಿಸಲಾಯಿತು ಎನ್ನಲಾಗಿದೆ.