ಬೆಂಗಳೂರು,ಜು.27– ರಾಮನಗರ ನಮ ಜಿಲ್ಲೆ. ಅಲ್ಲಿನ ಜನರ ಬದುಕು ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಿ ನಾವು ಮರುನಾಮಕರಣದ ಮೂಲಕ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೆ ಅಧಿಕಾರಕ್ಕೆ ಬಂದು ಹೆಸರು ಬದಲಾವಣೆ ಮಾಡುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹಣೆಯಲ್ಲಿ ಬರೆದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಯಾವಾಗಲೂ ನನ್ನನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಲಗಿ ಎದ್ದ ತಕ್ಷಣ ಅವರಿಗೆ ನಮ ವಿಚಾರ ನೆನಪಿಗೆ ಬರುತ್ತದೆ. ಅವರ ಆಚಾರ, ವಿಚಾರ, ಹೆಜ್ಜೆ, ಚಿಂತನೆ ಎಲ್ಲವೂ ನಮಗೆ ಗೊತ್ತಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣ ಮಾಡಲಾಗಿದೆ. ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರೆಯಲಿದೆ. ನಾವು ರಾಮನಗರವನ್ನು ಯಥಾಸ್ಥಿತಿಯಲ್ಲಿ ಉಳಿಸಿದ್ದೇವೆ ಎಂದು ಹೇಳಿದರು.
ಹೊರಗಿನಿಂದ ಬಂದು ಅಕ್ರಮ ಮಾಡಲು ರಾಜಕೀಯದಲ್ಲಿ ಅವಕಾಶವಿದೆ. ಆದರೆ ರಾಮನಗರ ನಮದು. ಈ ಹಿಂದೆ ಕೆಂಗಲ್ ಹನುಮಂತಯ್ಯ ಬೆಂಗಳೂರಿನಲ್ಲಿ ವಿಧಾನಸೌಧ ಕಟ್ಟಿದರು. ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಕೂಡ ಬೆಂಗಳೂರು ಜಿಲ್ಲೆಯಿಂದಲೇ ಆಯ್ಕೆಯಾಗಿ ಅಧಿಕಾರ ಅನುಭವಿಸಿದರು.
ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಎಲ್ಲಾ ತಾಲ್ಲೂಕುಗಳ ಜನರು ನಮವರು. ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಪೂರಕವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಂಗಳೂರಿಗೆ ವಿಶ್ವಮಟ್ಟದ ಖ್ಯಾತಿಯಿದೆ. ಆ ಹೆಸರನ್ನು ನಾವು ಏಕೆ ಬಿಟ್ಟುಕೊಡಬೇಕು ಎಂದು ಪ್ರಶ್ನಿಸಿದರು.
2028 ಕ್ಕೆ ಮರಳಿ ಅಧಿಕಾರಕ್ಕೆ ಬಂದು ರಾಮನಗರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಕುಮಾರಸ್ವಾಮಿ ಹೇಳಿರುವ ನೀಡಿಕೆಗೆ ಪ್ರತಿಕ್ರಯಿಸಿದ ಡಿ.ಕೆ.ಶಿವಕುಮಾರ್, ಅದು ಅವರ ಹಣೆಬರಹದಲ್ಲಿ ಬರೆದಿಲ್ಲ. 2028ಕ್ಕೂ ಕಾಂಗ್ರೆಸ್ ಪಕ್ಷವೇ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.